ಕಲಬುರಗಿ ಜಿಲ್ಲಾಧಿಕಾರಿಯನ್ನು ಅವಮಾನಿಸಿದ ಬಿಜೆಪಿ ನಾಯಕ ಎನ್.ರವಿಕುಮಾರ್ಗೆ ಬುದ್ಧಿ ಇಲ್ಲ : ಸಚಿವ ರಹೀಂ ಖಾನ್

ರಹೀಂ ಖಾನ್
ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿಯನ್ನು ಅವಮಾನಿಸಿದ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಗೆ ಬುದ್ಧಿ ಇಲ್ಲ ಎಂದು ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಇಲ್ಲಿನ ಡಿಸಿ ಅವರು ನಿಷ್ಟಾವಂತರಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ನಿರ್ವಹಣೆ ಬಗ್ಗೆ ಅವರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಬಂದಿದೆ. ಅಂತಹ ಒಳ್ಳೆಯ ಮಹಿಳಾ ಜಿಲ್ಲಾಧಿಕಾರಿಗಳಿಗೆ ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ಕಾಣುತ್ತೆ ಎಂದು ಹೇಳಿಕೆ ಕೊಟ್ಟಿರುವ ಎನ್.ರವಿಕುಮಾರ್ ಗೆ ಬುದ್ಧಿ ಇದೆಯೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿ.ಸಿ ಫೌಝಿಯಾ ತರನ್ನುಮ್ ಅವರ ಕಾರ್ಯವೈಖರಿ ಬಗ್ಗೆ ಗಮನಿಸಿದ್ದೇನೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳಿಂದ ರಿವೀವ್ ಬಂದಿದೆ. ಎಲ್ಲ ಇಲಾಖೆಗಳಲ್ಲಿ ಇವರೇ ಸ್ವತಃ ಮೀಟಿಂಗ್ ಮಾಡಿ ಅಭಿವೃದ್ಧಿಪರ ಕೆಲಸಗಳಿಗೆ ಹೆಚ್ಚು ಒತ್ತು ಕೊಡುವುದನ್ನು ಕೇಳಿದ್ದೇನೆ. ನಮ್ಮ ಇಲಾಖೆಯಲ್ಲೂ ಬೇರೆ ಬೇರೆ ಜಿಲ್ಲೆಗಳಿಗಿಂತ ಕಲಬುರಗಿಯಲ್ಲಿ ಗರಿಷ್ಠ ಶೇ.70ರಷ್ಟು ಕೆಲಸವಾಗಿದೆ. ಇಂತಹ ಜಿಲ್ಲಾಧಿಕಾರಿಗಳನ್ನು ಅವಮಾನಿಸುವುದು ಖಂಡನೀಯ. ಈ ತರಹ ಮಾತನಾಡಬಾರದು ಎಂದರು.





