ಕಲಬುರಗಿ | ರಾಷ್ಟ್ರ ಮಟ್ಟದ ʼನಮ್ಮ ಸರಸ್ ಮೇಳ-2025ʼ ಆಯೋಜನೆ; ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ

ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಜಾತ್ರೆ ಮೈದಾನದಲ್ಲಿ ಫೆಬ್ರವರಿ 24 ರಿಂದ ಮಾರ್ಚ್ 5ರ ವರೆಗೆ 10 ದಿನಗಳ ಕಾಲ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸಿದ ವಸ್ತುಗಳ ರಾಷ್ಟ್ರ ಮಟ್ಟದ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುವುದರಿಂದ ಬುಧವಾರ ಶ್ರೀ ಶರಣಬಸವೇಶ್ವರ ಜಾತ್ರೆ ಮೈದಾನಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
20 ರಾಜ್ಯಗಳ ಮಹಿಳಾ ಸ್ವ-ಸಹಾಯ ಗುಂಪುಗಳು ಈ ಮಾರಾಟ ಮೇಳದಲ್ಲಿ ಭಾಗಿಯಾಗುವುದರಿಂದ ಎಲ್ಲಾ ರೀತಿಯ ಸಿದ್ಧತೆ ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಸ್ಟಾಲ್ ಸ್ಥಾಪನೆ, ಸ್ವಚ್ಛತೆ, ಬಯೋ ಟಾಯಲೆಟ್ ವ್ಯವಸ್ಥೆ ಕಲ್ಪಿಸಬೇಕು. ಸಂಚಾರ ದಟ್ಟಣೆಯಾಗದಂತೆ ನಗರ ಪೊಲೀಸ್ ಮತ್ತು ಸಂಚಾರಿ ಪೊಲೀಸರು ಸಮಾಲೋಚನೆ ನಡೆಸಿ ವಾಹನ ಸಂಚಾರದ ಮಾರ್ಗಗಳು, ವಾಹನಗಳ ಪಾರ್ಕಿಂಗ್ ಸ್ಥಳದ ಕುರಿತು ಖಚಿತಪಡಿಸಿಕೊಳ್ಳಬೇಕೆಂದರು.
ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮುರಳೀಧರ ರತ್ನಗಿರಿ ಮತ್ತಿತರಿದ್ದರು.





