ನಾರಾಯಣ ಗುರುಗಳ ಕ್ರಾಂತಿಕಾರಿ ಚಿಂತನೆಗಳು ಇಂದಿಗೂ ದಾರಿದೀಪ: ಸಚಿವ ಪ್ರಿಯಾಂಕ್ ಖರ್ಗೆ
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ

ಕಲಬುರಗಿ: ಹಿಂದುಳಿದ ವರ್ಗಗಳು, ದಲಿತರು ಹಾಗೂ ಮಹಿಳೆಯರ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಕ್ರಾಂತಿಕಾರಿ ಚಿಂತನೆಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧ, ಬಸವಣ್ಣ, ನಾರಾಯಣ ಗುರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಲ್ಲಿ ಸಾಮ್ಯತೆ ಇದೆ. ಸಮಾನತೆ, ಸಾಮಾಜಿಕ ನ್ಯಾಯ, ಶಿಕ್ಷಣ ಹಾಗೂ ಮಾನವೀಯತೆಯನ್ನು ಪ್ರತಿಪಾದಿಸಿದ ಈ ಮಹಾಪುರುಷರ ತತ್ವಗಳು ಕೇವಲ ಜಯಂತಿ ಆಚರಣೆ ಮತ್ತು ಭಾಷಣಗಳಿಗೆ ಸೀಮಿತವಾಗಬಾರದು. ಅವು ಪ್ರತಿಯೊಬ್ಬರ ಜೀವನದಲ್ಲೂ ಅನುಷ್ಠಾನಗೊಳ್ಳಬೇಕು ಎಂದು ಸಚಿವರು ಹೇಳಿದರು.
ಇಂದಿನ ಯುವಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುವ ಬದಲು ಮಹಾಪುರುಷರ ಜೀವನ ಮತ್ತು ಚಿಂತನೆಗಳನ್ನು ಅಧ್ಯಯನ ಮಾಡಬೇಕು. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮಾಜದ ಎಲ್ಲ ವರ್ಗಗಳಿಗೂ ಸಮಬಾಳು ಮತ್ತು ಸಮಪಾಲು ಕಲ್ಪಿಸುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಸ್ಥಿರತೆ ತರುವ ಉದ್ದೇಶ ಹೊಂದಿವೆ. ಕಲಬುರಗಿಯಲ್ಲಿ ನಾರಾಯಣ ಗುರು ಭವನ ನಿರ್ಮಾಣಕ್ಕೆ ಹಾಗೂ ಸಮಾಜದ ಭವನ ನಿರ್ಮಾಣಕ್ಕಾಗಿ ಅಗತ್ಯವಿರುವ 1ರಿಂದ 2 ಎಕರೆ ಜಮೀನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಪ್ರಿಯಾಂಕ ಖರ್ಗೆ ಭರವಸೆ ನೀಡಿದರು.
ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಲಲ್ಲೂಜಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಅಸ್ಪೃಶ್ಯತೆ, ಜಾತಿ ತಾರತಮ್ಯ ಹಾಗೂ ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಾಮಾಜಿಕ ಸುಧಾರಣೆಯ ಕಾರ್ಯಕ್ಕೆ ಮುಂದಾದ ನಾರಾಯಣ ಗುರುಗಳು 60ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿ, ಅವುಗಳೊಂದಿಗೆ ಶಾಲೆಗಳನ್ನು ಆರಂಭಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಕೇರಳದಲ್ಲಿ ಉಂಟಾದ ಶೈಕ್ಷಣಿಕ ಜಾಗೃತಿ ಹಾಗೂ ಸಾಮಾಜಿಕ ಬದಲಾವಣೆಯ ಹಿಂದೆ ನಾರಾಯಣ ಗುರುಗಳ ಕ್ರಾಂತಿಕಾರಿ ಚಿಂತನೆಗಳ ಮಹತ್ವದ ಪಾತ್ರವಿದೆ ಎಂದು ಹೇಳಿದರು.
1925ರ ವೈಕಂ ಸತ್ಯಾಗ್ರಹದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ನಾರಾಯಣ ಗುರುಗಳ ಆಶ್ರಮಕ್ಕೆ ಭೇಟಿ ನೀಡಿ ಅವರ ಚಿಂತನೆಗಳಿಂದ ಪ್ರೇರಣೆ ಪಡೆದಿದ್ದರು ಎಂದು ಅವರು ತಿಳಿಸಿದರು.
ಶ್ರೀ ನಾರಾಯಣ ಗುರು ಮಹಾಸಂಸ್ಥಾನ ನಿಟ್ಟೂರು ಪೀಠಾಧಿಪತಿ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ನಾರಾಯಣ ಗುರುಗಳು ಪ್ರತಿಪಾದಿಸಿದ ಶಿಕ್ಷಣ ಮತ್ತು ಸಂಘಟನೆಯ ತತ್ವಗಳನ್ನು ಸಮಾಜದಲ್ಲಿ ಸಕ್ರಿಯವಾಗಿ ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದರು.
ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಜಗದೇವ ಗುತ್ತೇದಾರ್ ಅವರ ನೇತೃತ್ವದಲ್ಲಿ ಸಮಾಜದ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿಗೆ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ರಾಜೇಶ್ ಗುತ್ತೇದಾರ್ ಮಾತನಾಡಿ, ನಾರಾಯಣ ಗುರುಗಳ ಹೆಸರಿನಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ಹಾಗೂ ಸಮುದಾಯ ಭವನ ನಿರ್ಮಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು. ಸಮಾಜದ ಒಳಿತಿಗಾಗಿ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಖ್ಯಾತ ವಾಗ್ಮಿ ನಿಕೇತ ರಾಜ್ ಮೌರ್ಯ ವಿಶೇಷ ಉಪನ್ಯಾಸ ನೀಡಿ, ಶತಮಾನಗಳ ಹಿಂದೆ ಕೇರಳದಲ್ಲಿ ಬೇರೂರಿದ್ದ ತೀವ್ರ ಜಾತ್ಯಂಧತೆ ಮತ್ತು ಸಾಮಾಜಿಕ ಶೋಷಣೆಯ ವಿರುದ್ಧ ನಾರಾಯಣ ಗುರುಗಳು ನಡೆಸಿದ ಹೋರಾಟವು ಭಾರತೀಯ ಸಾಮಾಜಿಕ ಸುಧಾರಣೆಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ ಎಂದರು.
ಅಂದಿನ ಹಿಂದುಳಿದ ಸಮುದಾಯಗಳಿಗೆ ದೇವಸ್ಥಾನ ಪ್ರವೇಶ, ಶಿಕ್ಷಣ ಹಾಗೂ ಸಂಚಾರದ ಹಕ್ಕು ದೊರಕಿಸುವ ನಿಟ್ಟಿನಲ್ಲಿ ನಾರಾಯಣ ಗುರುಗಳು ಮಹತ್ವದ ಹೋರಾಟ ನಡೆಸಿದರು. ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ವೈಕಂ ಸತ್ಯಾಗ್ರಹವು ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ಪ್ರಮುಖ ಚಿಂತಕರಿಗೆ ಪ್ರೇರಣೆಯಾಯಿತು ಎಂದು ಹೇಳಿದರು.
ನಾರಾಯಣ ಗುರುಗಳ ಶಿಷ್ಯರಾದ ಡಾ. ಪದ್ಮನಾಭ ಅವರಿಗೆ ಕೇರಳದಲ್ಲಿ ಅವಕಾಶ ನಿರಾಕರಿಸಲ್ಪಟ್ಟ ಸಂದರ್ಭದಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉದ್ಯೋಗ ನೀಡಿ ಗೌರವಿಸಿದ್ದು ಸಾಮಾಜಿಕ ಸಮಾನತೆಯ ಇತಿಹಾಸದಲ್ಲಿ ಗಮನಾರ್ಹ ಘಟನೆ ಎಂದು ಅವರು ವಿವರಿಸಿದರು.
‘ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು’ ಎಂಬ ನಾರಾಯಣ ಗುರುಗಳ ತತ್ವವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಯಿತು. ಇಂದಿನ ಅಸಮಾನತೆ, ಜಾತಿ ತಾರತಮ್ಯ ಮತ್ತು ಸಾಮಾಜಿಕ ವಿಭಜನೆಯ ಸಂದರ್ಭದಲ್ಲಿ ಅವರ ಚಿಂತನೆಗಳು ಇನ್ನಷ್ಟು ಪ್ರಸ್ತುತವಾಗಿವೆ ಎಂದು ನಿಕೇತ ರಾಜ್ ಮೌರ್ಯ ಹೇಳಿದರು.
ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ ಮಾತನಾಡಿ, ಜಿಲ್ಲೆಯ ಸಮಾಜದ ಯುವಜನರು ಶೈಕ್ಷಣಿಕವಾಗಿ ಮುನ್ನಡೆಯಲು ಉನ್ನತ ಶಿಕ್ಷಣದ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಸಮಾಜದ ಆಸ್ತಿಯನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ದೊರೆಯುವಂತೆ ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಅಗತ್ಯ ಸಹಕಾರ ನೀಡಬೇಕು. ಹೆಲಿಪುರದಲ್ಲಿರುವ ಸಮಾಜದ 7 ಎಕರೆ ಜಾಗವನ್ನು ಕಾನೂನುಬದ್ಧವಾಗಿ ಸಂರಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಜಗದೀಶ್ವರಿ ಅ. ನಾಸಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಅಫಜಲಪುರ ಶಾಸಕ ಎಂ.ವೈ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್ ಹರವಾಳ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತೋತ್ಸವ ಸಮಿತಿ ಅಧ್ಯಕ್ಷ ಅಶೋಕ ಕಲಾಲ ಸನ್ನತಿ, ಕಲಬುರಗಿ ಆರ್ಯ ಈಡಿಗ ಸಮಾಜ ಸಂಘದ ಅಧ್ಯಕ್ಷ ರಾಜೇಶ್ ಜಗದೇವ ಗುತ್ತೇದಾರ್, ಬಸಯ್ಯ ಗುತ್ತೇದಾರ್ ಗಾರಂಪಳ್ಳಿ, ಮಹಾದೇವಿ ಬಿ. ಗುತ್ತೇದಾರ್, ರಾಜೇಶ್ ಡಿ. ಗುತ್ತೇದಾರ್, ವಿನೋದ್ ಕುಮಾರ್ ಗುತ್ತೇದಾರ್, ನಾಗರಾಜ ಗುತ್ತೇದಾರ್, ಜಮುನಾ ಅಶೋಕ್ ಗುತ್ತೇದಾರ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.






