ಸಿಎಂ ಬದಲಾದರೂ ವ್ಯವಸ್ಥೆ ಬದಲಾಗುವುದಿಲ್ಲ: ಕಾಂಗ್ರೆಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಕಲಬುರಗಿ: ಸಿಎಂ ಸ್ಥಾನದಲ್ಲಿದ್ದ ವ್ಯಕ್ತಿ ಬದಲಾಗಬಹುದು, ಆದರೆ ವ್ಯವಸ್ಥೆ ಬದಲಾಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ತಿಂಗಳಲ್ಲಿ ನಾಲ್ವರು ಹಿಂದೂ ವಿರೋಧಿ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
“ಕೋಮುವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಿಜವಾದ ಕೋಮುವಾದಿಗಳು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರೇ” ಆಗಿದ್ದಾರೆ ಎಂದು ಆರೋಪಿಸಿದರು.
ಕಾಂತಾರಾಜ ವರದಿಯಲ್ಲಿ ದಲಿತ ಸಮುದಾಯ ಮೊದಲ ಸ್ಥಾನದಲ್ಲಿತ್ತು. ಆದರೆ ಪ್ರಸ್ತುತ ವರದಿಯಲ್ಲಿ ಮುಸ್ಲಿಂ ಸಮುದಾಯ ಮೊದಲ ಸ್ಥಾನಕ್ಕೆ ಬಂದಿದೆ ಎಂದು ಹೇಳಿದ ಅವರು, “ಜಾತಿ-ಜಾತಿಗಳ ಮಧ್ಯೆ ಸಂಘರ್ಷ ಸೃಷ್ಟಿಸಿರುವುದು ಸಿದ್ದರಾಮಯ್ಯ ಸರ್ಕಾರ” ಎಂದು ಟೀಕಿಸಿದರು.
“ಒಮ್ಮೆ ನಂಬರ್ ಒನ್ ಸ್ಥಾನದಲ್ಲಿದ್ದ ದಲಿತರು ಇಂದು ಲೆಕ್ಕಕ್ಕಿಲ್ಲದಂತಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಸಿದ್ದರಾಮಯ್ಯ ಬಿಡಲಿಲ್ಲ ಎಂದು ಆರೋಪಿಸಿದ ಅವರು, “ಪ್ರಧಾನಮಂತ್ರಿಯವರೂ ಅಹಿಂದ ವರ್ಗಕ್ಕೇ ಸೇರಿದವರು. ಅಧಿಕಾರದ ಮದದಲ್ಲಿ ಇತರ ನಾಯಕರ ಬಗ್ಗೆ ತುಚ್ಛವಾಗಿ ಮಾತನಾಡುವುದು ಸರಿಯಲ್ಲ” ಎಂದರು.
ರಾಜ್ಯದಲ್ಲಿ ಇಂತಹ ಆಡಳಿತ ಅಂತ್ಯವಾಗಬೇಕೆಂದು ಜನರು ನಿರೀಕ್ಷೆ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸಾಮರಸ್ಯ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಅವರು ದೂರಿದರು.
ಇಂಧನ ದರ ಏರಿಕೆ ಕುರಿತು ಮಾತನಾಡಿದ ಅವರು, “ತೈಲ ಬೆಲೆ ಏರಿಕೆ ಮಾಡಿರುವುದು ಆಯಿಲ್ ಕಂಪೆನಿಗಳು. ನಷ್ಟ ತಪ್ಪಿಸಿಕೊಳ್ಳಲು ಕಂಪೆನಿಗಳು ದರ ಹೆಚ್ಚಿಸಿವೆ. ಇದಕ್ಕೂ ಸರಕಾರಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಹೇಳಿದರು.
“ಅಧಿಕಾರ ಹಸ್ತಾಂತರದಿಂದ ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಬದಲಾಗಿ ಇನ್ನಷ್ಟು ಹೆಚ್ಚಾಗುತ್ತದೆ” ಎಂದು ಟೀಕಿಸಿದ ಅವರು, “ಈ ಸರ್ಕಾರವನ್ನು ಕಿತ್ತೆಸೆಯಲು ಜನರು ಸಜ್ಜಾಗಬೇಕು” ಎಂದು ಕರೆ ನೀಡಿದರು.
ಶಾಲಾ-ಕಾಲೇಜುಗಳಲ್ಲಿ ಒಂದೇ ರೀತಿಯ ಯೂನಿಫಾರ್ಮ್ ಇರಬೇಕೆಂದು ಹೇಳಿದ ಅವರು, “ಆ ಕಾರಣಕ್ಕಾಗಿಯೇ ಬಿಜೆಪಿ ಸರಕಾರ ಹಿಜಾಬ್ ನಿಷೇಧ ಮಾಡಿತ್ತು. ಆದರೆ ಕಾಂಗ್ರೆಸ್ ಸರಕಾರ ಓಲೈಕೆ ರಾಜಕಾರಣಕ್ಕಾಗಿ ಮತ್ತೆ ಹಿಜಾಬ್‌ಗೆ ಅವಕಾಶ ನೀಡಿದೆ” ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಎಂಎಲ್ಸಿ ಬಿ.ಜಿ ಪಾಟೀಲ್, ಮಾಜಿ ಸಂಸದ ಉಮೇಶ್ ಜಾಧವ್, ರಾಜಕುಮಾರ್ ಪಾಟೀಲ್ ತೆಲ್ಕೂರ, ದತ್ತಾತ್ರೇಯ ಪಾಟೀಲ್ ರೇವೂರ, ಶಿವರಾಜ್ ಪಾಟೀಲ್ ರದ್ದೇವಾಡಗಿ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.






