ಆ.30ರಂದು ಕಲಬುರಗಿಯಲ್ಲಿ ರಾಷ್ಟ್ರೀಯ ಗೋರ್ ಬಂಜಾರ ತೀಜ್ ಹಬ್ಬ : ಡಾ.ಸುಭಾಶ್ಚಂದ್ರ ರಾಠೋಡ

ಕಲಬುರಗಿ: ಕರ್ನಾಟಕ ರಾಜ್ಯ ಜೂಡೋ ಬಂಜಾರ ಫೌಂಡೇಶನ್ ಸಹಯೋಗದಲ್ಲಿ ‘ರಾಷ್ಟ್ರೀಯ ಗೋರ್ ಬಂಜಾರ ತೀಜ್ ಹಬ್ಬ–2026’ ಅನ್ನು ಆ.30ರಂದು ನಗರದ ಬಂಜಾರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಿವಿಲ್ ನ್ಯಾಯಾಧೀಶ ಡಾ.ಸುಭಾಶ್ಚಂದ್ರ ರಾಠೋಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಂಜಾರ ಸಮುದಾಯದ ಶ್ರೀಮಂತ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ ಹಾಗೂ ವೈವಿಧ್ಯಮಯ ಪರಂಪರೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ರಾಷ್ಟ್ರೀಯ ಮಟ್ಟದ ಈ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
‘ನಮ್ಮ ಸಂಸ್ಕೃತಿ–ನಮ್ಮ ಹೆಮ್ಮೆ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಉತ್ಸವವು ಬಂಜಾರ ಸಮುದಾಯದ ಒಗ್ಗಟ್ಟು, ಸಾಂಸ್ಕೃತಿಕ ವೈಭವ ಹಾಗೂ ವಿಶಿಷ್ಟ ಗುರುತನ್ನು ಸಮಾಜಕ್ಕೆ ಪರಿಚಯಿಸುವ ಮಹತ್ವದ ವೇದಿಕೆಯಾಗಲಿದೆ. ಸಮುದಾಯದ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆ.30ರಂದು ಭಾನುವಾರ ಮಧ್ಯಾಹ್ನ 2ರಿಂದ ರಾತ್ರಿ 8 ಗಂಟೆಯವರೆಗೆ ಕಲಬುರಗಿ ನಗರದ ಬಂಜಾರ ಭವನದಲ್ಲಿ ರಾಷ್ಟ್ರೀಯ ಗೋರ್ ಬಂಜಾರ ತೀಜ್ ಹಬ್ಬ ನಡೆಯಲಿದೆ. ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಬಾಂಧವರು ಒಂದೆಡೆ ಸೇರಿ ನಾಡಿನ ಸುಖ, ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದಕ್ಕಾಗಿ ಪ್ರಾರ್ಥಿಸಲಿದ್ದಾರೆ.
ಬಂಜಾರ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ, ಸಮುದಾಯದ ಒಗ್ಗಟ್ಟು ಹಾಗೂ ಯುವ ಪೀಳಿಗೆಯಲ್ಲಿ ಸಾಂಸ್ಕೃತಿಕ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ರಾಷ್ಟ್ರೀಯ ಮಟ್ಟದ ಈ ಸಾಂಸ್ಕೃತಿಕ ಹಬ್ಬದಲ್ಲಿ ಬಂಜಾರ ಸಮುದಾಯದ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಡಾ. ಸುಭಾಶ್ಚಂದ್ರ ರಾಠೋಡ ಮನವಿ ಮಾಡಿದ್ದಾರೆ.






