ಕಲಬುರಗಿ ಜಿಲ್ಲೆಯ ನೀರಾವರಿ ಯೋಜನೆಗಳ ಸುಧಾರಣೆಗೆ ಅಗತ್ಯ ಕ್ರಮ : ಡಿಸಿಎಂ ಡಿಕೆಶಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಕಕಲಬುರಗಿ : ಜಿಲ್ಲೆಯ ಪ್ರಮುಖ ನದಿಗಳು, ಜಲಾಶಯಗಳಿದ್ದರೂ ಇಂದಿಗೂ ರೈತರ ಜಮೀನು ಹಸಿಯಾಗಿಲ್ಲ, ನೀರು ಬಾರದೆ ರೈತರು ನಿರಾಶರಾಗಿ ಮುಗಿಲು ನೋಡೋದು ತಪ್ಪಿಲ್ಲ. ತಕ್ಷಣ ಈ ಬಗ್ಗೆ ಸರಕಾರ ಗಮನ ಹರಿಸಿ, ಯೋಜನೆಗಳಲ್ಲಿನ ದೋಷ ಪರಿಹರಿಸಿ ರೈತರಿಗೆ ನೀರು ಕೊಡಬೇಕೆಂದು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸದನದಲ್ಲಿ ಒತ್ತಾಯಿಸಿದ್ದಾರೆ.
ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸ್ಪಂದಿಸಿರುವ ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಕಲಬುರಗಿ ಜಿಲ್ಲೆ ನೀರಾವರಿ ಯೋಜನೆಗಳ ಸುಧಾರಣೆಗೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಅದಲ್ಲದೆ ಭೀಮಾ ನದಿಯ ಪಾಲಿನ ನೀರನ್ನು ಬಳಕೆಗೆ ಬಿಡದೆ ಮಹಾರಾಷ್ಟ್ರ ನುಂಗಿ ಹಾಕಿದೆ ಎಂಬ ಆರೋಪಗಳ ಬಗ್ಗೆಯೂ ಅಧಿಕಾರಿಗಳ ಬಳಿ ಚರ್ಚಿಸಿ ಮುಂದಿನ ಅಗತ್ಯ ಕ್ರಮದ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಶಾಸಕ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಮುಖವಾಗಿ ಭೀಮಾ ಲಿಫ್ಟ್, ಗಂಡೋರಿ ನಾಲಾ, ಬೆಣ್ಣೆತೊರಾ, ಚಂದ್ರಂಪಳ್ಳಿ, ಅಮರ್ಜಾ, ಮುಲ್ಲಾಮಾರಿ ಕೆಳದಂಡೆ ಹೀಗೆ 6 ಪ್ರಮುಖ ನೀರಾವರಿ ಯೋಜನೆಗಳಿದ್ದರೂ ಕಾಲುವೆ ಕೊನೆ ಭಾಗದ ರೈತರ ಗೋಳು ಬದಿಗಿಡಿ, ಅಣೆಕಟ್ಟೆಗೆ ಹೊಂದಿಕೊಂಡಿರುವ ಜಮೀನುಗಳಿಗೆ ನೀರು ಹರಿದಿಲ್ಲ. ಈ ಜಲಾಶಯಗಳ ಮೇಲೆ ಕೋಟ್ಯಂತರ ರೂಪಾಯಿ ಹಾಕಿದರೂ, ರೈತರಿಗೆ ಪ್ರಯೋಜನವಾಗಿಲ್ಲ. ಕೆಳದಂಡೆ ಮುಲ್ಲಾಮಾರಿ ಯೋಜನೆಯಲ್ಲಿ ಸುಧಾರಣೆಗೆ ಬಿಡುಗಡೆಯಾಗಿರುವ 125 ಕೋಟಿ ರೂ. ವೆಚ್ಚ ಸರಿಯಾಗಿಲ್ಲವೆಂಬ ಆರೋಪಗಳಿದ್ದವು. ಈಗ ಯೋಜನೆ ಪೂರ್ಣಗೊಂಡಿಲ್ಲ, ಇತ್ತ ಕಳಪೆ ಕಾಮಗಾರಿ, ಅತ್ತ ರೈತರಿಗೆ ನೀರಿಲ್ಲ. ತೆರಿಗೆ ಹಣ ವ್ಯರ್ಥ ಎಂದು ಪಾಟೀಲ್ ಸದನದಲ್ಲಿ ದೂರಿದರು.
ಮುಖ್ಯ ಸಂಗತಿಗಳು :
ಬೆಣ್ಣೆತೊರಾ ಯೋಜನೆ ಬಹುದೊಡ್ಡ ಯೋಜನೆಯಾಗಿದ್ದು, 80 ಕಿಮೀ ಕಾಲುವೆ ನಿರ್ಮಿಸಿದರೂ ಕಾಲುವೆಯ ಅಲೈನ್ಮೆಂಟ್ ಸರಿಯಾಗಿಲ್ಲದ ಕಾರಣ ನೀರು ಅಣೆಕಟ್ಟೆ ಬಿಟ್ಟು ಹೊರಗೆ ಬರುತ್ತಲೇ ಇಲ್ಲ. ರೈತರು ನೀರಿಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದರೂ, ಅಲ್ಲಿ ಸಮಸ್ಯೆ ಸರಿಪಡಿಸುವ ಕೆಲಸವಾಗುತ್ತಿಲ್ಲ. ಅಫಜಲ್ಪುರ ತಾಲೂಕಿನ ಭೀಮಾ ಲಿಫ್ಟ್ನಲ್ಲಿಯೂ ಇದೇ ಗೋಳು. ಸಾಕಷ್ಟು ಹಣ ವೆಚ್ಚವಾದರೂ ಅಸಲಿಗೆ ನೀರೇ ಕಾಲುವೆಗೆ ಬರುತ್ತಿಲ್ಲ. ಕಾಲುವೆಗಳು ಹಾಳಾಗಿ ಹೋಗಿವೆ. ಹುಲ್ಲು ಬೆಳೆದಿದ್ದರೂ ಸರಿಪಡಿಸುವ ಕೆಲಸ ಆಗಿಲ್ಲ. ರೈತರಿಗೆ ಇದರಂದ ಪ್ರಯೋಜನವಾಗಿಲ್ಲ ಎಂದರು.
ಚಿಂಚೋಳಿಯ ಮುಲ್ಲಾಮಾರಿಯಲ್ಲೂ ಗೋಳು ತಪ್ಪಿಲ್ಲ : 10 ಸಾವಿರ ಹೆಕ್ಟರ್ ನೀರು ಹರಿಸುವ ಯೋಜನೆಯಲ್ಲೂ ಕಳಪೆತನದ್ದೇ ಕಾರುಬಾರು. ಕೋಟಿಗಟ್ಟಲೆ ಹಣ ವೆಚ್ಚವಾದರೂ ನಿರೀಕ್ಷೆಯಂತೆ ಕೆಲಸವಾಗಿಲ್ಲ. ಹೀಗಾಗಿ ರೈತರ ಗೋಳು ತಪ್ಪಿಲ್ಲ. ಚಂದಂಪ್ರಳ್ಳಿ ಯೋಜನೆಯಲ್ಲಯೂ ಗೋಳಾಟ ಸಾಕಷ್ಟಿದೆ. ಆಳಂದದ ಅಣರ್ಜಾ ಯೋಜನೆಯಲ್ಲಿಯೂ ಇದೇ ಪರಿಸ್ಥಿತಿ. 225 ಕೋಟಿ ರೂ. ವೆಚ್ಚವಾದರೂ ನೀರು ಜಮೀನು ಸೇರಿಲ್ಲ. ಕಾಡಾ, ನೀರಾವರಿ, ಕೃಷಿ ಹಾಗೂ ಕಂದಾಯ ಇಲಾಖೆಗಳ ನಡುವಿನ ಸಮನ್ಯಯ ತಪ್ಪಿರೊದೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ನೀರು ಬಳಕೆದಾರರ ಸಂಘ, ಅಣೆಕಟ್ಟು ಪ್ರಾಧಿಕಾರದ ಮಧ್ಯೆ ಸಮನ್ವಯ ಕೊರತೆಯಿಂದಾಗಿ ಯೋಜನೆಗಳು ಕುಂಟುತ್ತಿವೆ. ಸಮಸ್ಯೆ ಸರಿಪಡಿಸಲು ಈ ಎಲ್ಲಾ ಯೋಜನೆಗಳಲ್ಲಿ ಕಾಮಗಾರಿಗಳ ಮೌಲ್ಯಮಾಪನವಾಗಬೇಕು. ಬಾಕಿ ಕಾಮಗಾರಿ ಏನೆಲ್ಲಾ ಆಗಬೇಕು ಎಂಬುದನ್ನು ಪಟ್ಟಿಯಾಗಿ ಯೋಜನೆವಾರು ಲೆಕ್ಕಹಾಕಿ ಹೆಚ್ಚುವರಿ ಹಣ ಮಂಜೂರು ಮಾಡಿ ಬಿಸಿಲೂರಿನ ರೈತರ ಹೊಲಗದ್ದೆಗೆ ನೀರು ಹರಿಯುವಂತೆ ಮಾಡಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಆಗ್ರಹಿಸಿದ್ದಾರೆ.