ಕಣಸೂರು ಬಳಿ ಬೆಣ್ಣೆತೊರ ನದಿಗೆ 21 ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ಕಾಳಗಿ ತಾಲ್ಲೂಕಿನ ಕಣಸೂರು ಬಳಿ ಬೆಣ್ಣೆತೊರ ನದಿಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಾಣ ಹಾಗೂ ಅಪ್ರೋಚ್ ರಸ್ತೆಯನ್ನು ಎತ್ತರಿಸುವ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಹೆದ್ದಾರಿ 125ರ 51ನೇ ಕಿಲೋಮೀಟರ್ನಲ್ಲಿರುವ ಕಣಸೂರು ಸೇತುವೆ ಪ್ರವಾಹದ ಸಂದರ್ಭದಲ್ಲಿ ಸಂಪೂರ್ಣ ಮುಳುಗಡೆಯಾಗುತ್ತಿತ್ತು. ಇದರಿಂದ ಹಲವು ದಿನಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡು, ಸುತ್ತಮುತ್ತಲಿನ ಗ್ರಾಮಗಳ ಜನರು ತೀವ್ರ ಸಂಪರ್ಕ ಸಮಸ್ಯೆ ಎದುರಿಸುತ್ತಿದ್ದರು.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್ಡಿಸಿಎಲ್) ಬಂಡವಾಳ ವೆಚ್ಚದಡಿ ಅಂದಾಜು 21 ಕೋಟಿ ರೂ. ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಜನೆಯಡಿ 160 ಮೀಟರ್ ಉದ್ದ ಹಾಗೂ 10.50 ಮೀಟರ್ ಅಗಲದ ಆರ್ಸಿಸಿ ಗರ್ಡರ್ ಸೇತುವೆ ನಿರ್ಮಿಸಲಾಗುತ್ತದೆ. ಸೇತುವೆಯ ಎರಡೂ ಬದಿಗಳಲ್ಲಿ ಒಟ್ಟು 540 ಮೀಟರ್ ಉದ್ದದ ಬಿಟುಮಿನಸ್ ಅಪ್ರೋಚ್ ರಸ್ತೆಯನ್ನು ಎತ್ತರಿಸಿ ನಿರ್ಮಿಸಲಾಗುವುದು.
ನೂತನ ಸೇತುವೆ ಹಾಗೂ ಎತ್ತರಿಸಿದ ರಸ್ತೆಯಿಂದ ಭಾರಿ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲೂ ವಾಹನ ಸಂಚಾರ ಸುಗಮವಾಗಲಿದೆ. ಇದರಿಂದ ಈ ಭಾಗದ ಗ್ರಾಮಸ್ಥರು ಹಾಗೂ ಪ್ರಯಾಣಿಕರಿಗೆ ದೀರ್ಘಕಾಲದಿಂದ ಎದುರಾಗುತ್ತಿದ್ದ ಸಂಪರ್ಕ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.






