ಕಲ್ಯಾಣ ಕರ್ನಾಟಕಕ್ಕೆ ಹೊಸ ಆರ್ಥಿಕ ಮಿಷನ್; ಕಲಬುರಗಿಯಲ್ಲಿ ಐಟಿ ಪಾರ್ಕ್, ಸ್ಪೋರ್ಟ್ಸ್ ಸಿಟಿ: ಸಿಎಂ ಡಿ.ಕೆ.ಶಿವಕುಮಾರ್
50 ಸಾವಿರ ನಿವೇಶನ, ಒಂದು ಕೋಟಿ ಗಿಡ ನೆಡುವ ಅಭಿಯಾನ; ಎಐ ಆಧಾರಿತ ಸಿಸಿಟಿವಿ ಜಾಲ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು

ಕಲಬುರಗಿ: ಬಸವಣ್ಣನವರ ಹೋರಾಟದ ನೆಲ ಹಾಗೂ 12ನೇ ಶತಮಾನದ ಸಾಮಾಜಿಕ ಕ್ರಾಂತಿಗೆ ಸಾಕ್ಷಿಯಾದ ಪವಿತ್ರ ಭೂಮಿಯಾದ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಗುರುವಾರ ನಡೆದ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
“ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣವೇ ನಮ್ಮ ಆದ್ಯತೆ. ಈ ಪ್ರದೇಶವನ್ನು ರಾಜ್ಯದ ಅಭಿವೃದ್ಧಿಯ ಪ್ರಮುಖ ಶಕ್ತಿ ಕೇಂದ್ರವನ್ನಾಗಿ ರೂಪಿಸುವ ಸಂಕಲ್ಪ ನಮ್ಮದು. ಸತ್ಯಕ್ಕೆ ಸಮನಾದ ಇನ್ನೊಂದಿಲ್ಲ. ಜನರ ಸೇವೆಯೇ ದೇವರ ಸೇವೆ. ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಜಾಸೇವಾ ಇಲಾಖೆ ಜಾರಿಗೊಳಿಸಲಾಗಿದ್ದು, ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಪರಿಹರಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ,” ಎಂದರು.
371(ಜೆ) ಅನುಷ್ಠಾನಕ್ಕೆ ಆದ್ಯತೆ:
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371(ಜೆ) ಕಲಂನ ಅನುಷ್ಠಾನದಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಶಿವಕುಮಾರ್ ಸ್ಮರಿಸಿದರು.
“371(ಜೆ)ಯ ಉದ್ದೇಶ ಈ ಭಾಗದ ಪ್ರತಿಯೊಂದು ಕುಟುಂಬಕ್ಕೂ ಶಿಕ್ಷಣ ಮತ್ತು ಉದ್ಯೋಗದ ಅವಕಾಶ ದೊರೆಯಬೇಕು ಎಂಬುದಾಗಿದೆ. ಕಳೆದ 12 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ 23 ಸಾವಿರ ಕೋಟಿ ರೂ. ಗೂ ಅಧಿಕ ವಿಶೇಷ ಅನುದಾನ ದೊರೆತಿದ್ದು, ಈ ಭಾಗದ ಅಭಿವೃದ್ಧಿಗೆ ಸರ್ಕಾರ ನಿರಂತರವಾಗಿ ಆದ್ಯತೆ ನೀಡುತ್ತಿದೆ” ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 8 ಸಾವಿರಕ್ಕೂ ಹೆಚ್ಚು ಕಾಮಗಾರಿಗಳು ಪ್ರಗತಿಯಲ್ಲಿವೆ. ಸುಮಾರು 79,300 ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದ್ದು, ಇನ್ನೂ 32 ಸಾವಿರ ಹುದ್ದೆಗಳನ್ನು ಈ ಭಾಗಕ್ಕೆ ಒದಗಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆಕೆಆರ್‌ಡಿಬಿಗೆ 5,000 ಕೋಟಿ ರೂ. ಅನುದಾನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ವಿಶೇಷ ಸಚಿವ ಸಂಪುಟ ಸಭೆಯಲ್ಲಿ 11,770 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಆರ್ಥಿಕ ಮಿಷನ್:
ಪ್ರದೇಶದಲ್ಲಿ ಕೈಗಾರಿಕೆ ಮತ್ತು ಹೂಡಿಕೆಗೆ ವೇಗ ನೀಡಲು ಕಲ್ಯಾಣ ಕರ್ನಾಟಕ ಎಕನಾಮಿಕ್ ಮಿಷನ್ (KKEM) ಅನ್ನು ಸೆಕ್ಷನ್-8 ಕಂಪನಿಯಾಗಿ ಸ್ಥಾಪಿಸಲಾಗುವುದು. ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಿ ಹೊಸ ಉದ್ಯೋಗ ಹಾಗೂ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಘೋಷಿಸಿದರು.
ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸಿ ರೈತರ ಆದಾಯ ಹೆಚ್ಚಿಸಲು ಜೈವಿಕ ಆರ್ಥಿಕ ಮಿಷನ್ ಸ್ಥಾಪಿಸಲಾಗುವುದು. ತೊಗರಿ ಬೇಳೆ, ಕಮಲಾಪುರ ಬಾಳೆಹಣ್ಣು, ಒಣದ್ರಾಕ್ಷಿ ಹಾಗೂ ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಲಾಗುವುದು ಎಂದರು.
ಕಲಬುರಗಿಗೆ ಐಟಿ ಪಾರ್ಕ್, KRIYA
ಕಲಬುರಗಿ ನಗರದಲ್ಲಿ ಐಟಿ ಮತ್ತು ನಾವೀನ್ಯತಾ ಕ್ಷೇತ್ರವನ್ನು ಬೆಳೆಸಲು 30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಸ್ಟಾರ್ಟ್‌ಅಪ್‌ಗಳು, ನಾವೀನ್ಯತೆ ಮತ್ತು ಯುವ ಉದ್ಯಮಿಗಳನ್ನು ಉತ್ತೇಜಿಸಲು KRIYA–Kalaburagi Research, Innovation and Youth Accelerator ಸ್ಥಾಪಿಸಲಾಗುವುದು ಎಂದು ಶಿವಕುಮಾರ್ ಪ್ರಕಟಿಸಿದರು.
ನಗರದ ಸಂಚಾರ ವ್ಯವಸ್ಥೆ ಸುಧಾರಿಸಲು ಸೇಡಂ ರಸ್ತೆಯ ರಿಂಗ್‌ರೋಡ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಹೊಸ ಪೆರಿಫೆರಲ್ ರಿಂಗ್‌ರೋಡ್‌ಗಾಗಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ನಗರದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಹೊಸ ಕೆರೆ ಹಾಗೂ ಮನರಂಜನಾ ಉದ್ಯಾನ ಅಭಿವೃದ್ಧಿಪಡಿಸುವ ಯೋಜನೆಯೂ ಇದೆ ಎಂದರು.
ನಿವೇಶನರಹಿತ ಕುಟುಂಬಗಳಿಗೆ 50 ಸಾವಿರ ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದರು.
ಎಐ ಸಿಸಿಟಿವಿ ಜಾಲ:
ಸಾರ್ವಜನಿಕ ಸುರಕ್ಷತೆ, ಅಪರಾಧ ತಡೆ ಹಾಗೂ ಸಂಚಾರ ನಿರ್ವಹಣೆಯನ್ನು ಬಲಪಡಿಸಲು ಕಲಬುರಗಿ ನಗರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ *ಎಐ ಆಧಾರಿತ ಸಿಸಿಟಿವಿ ವ್ಯವಸ್ಥೆ* ಅಳವಡಿಸಲಾಗುವುದು. ತ್ಯಾಜ್ಯ ನಿರ್ವಹಣೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ನಾಗರಿಕ ಸೇವೆಗಳ ಮೇಲ್ವಿಚಾರಣೆಯಲ್ಲಿಯೂ ತಂತ್ರಜ್ಞಾನ ಬಳಸಲಾಗುವುದು ಎಂದರು.
ಪ್ರವಾಸೋದ್ಯಮಕ್ಕೆ ಹೊಸ ರೂಪ:
ಕಲಬುರಗಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ್ ದರ್ಗಾ, ಬುದ್ಧ ವಿಹಾರ, ಮಳಖೇಡ, ಸನ್ನತಿ ಹಾಗೂ ಗಾಣಗಾಪುರ ಸೇರಿದಂತೆ ಪ್ರಮುಖ ಧಾರ್ಮಿಕ ಮತ್ತು ಪಾರಂಪರಿಕ ತಾಣಗಳನ್ನು ಸಂಪರ್ಕಿಸುವ ಪುಣ್ಯಯಾತ್ರಾ ಸರ್ಕ್ಯೂಟ್ ಅಭಿವೃದ್ಧಿಪಡಿಸಲಾಗುವುದು.
ಗಾಣಗಾಪುರವನ್ನು ಮೊದಲ ಹಂತದಲ್ಲಿ 50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಮಳಖೇಡ, ನಾಗಾವಿ, ಕಾಳಗಿ ಹಾಗೂ ಸನ್ನತಿಯ ಪಾರಂಪರಿಕ ತಾಣಗಳ ಪುನರಾಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ. ಬಸವಣ್ಣನವರ ತತ್ವಗಳು ಮತ್ತು ವಚನ ಪರಂಪರೆಯನ್ನು ಯುವಜನರಿಗೆ ಪರಿಚಯಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.
ಕಲಬುರಗಿಯಲ್ಲಿ ಸ್ಪೋರ್ಟ್ಸ್ ಸಿಟಿ:
ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಮುಂದಿನ ಎರಡು ವರ್ಷಗಳಲ್ಲಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣವನ್ನು ಆಧುನಿಕ ಕ್ರೀಡಾ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿಪಡಿಸಲಾಗುವುದು. ಕ್ರಿಕೆಟ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕೆಎಸ್‌ಸಿಎ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು.
ಕಲಬುರಗಿ ತಾಲೂಕಿನ ಹಡಗಿಲ ಹಾರುತಿ ಗ್ರಾಮದಲ್ಲಿ ‘ಸ್ಪೋರ್ಟ್ಸ್ ಸಿಟಿ’ ಸ್ಥಾಪಿಸಲಾಗುವುದು. ವಿವಿಧ ಕ್ರೀಡೆಗಳಿಗೆ ಅಂತರರಾಷ್ಟ್ರೀಯ ಮಟ್ಟದ ಒಳಾಂಗಣ ಮತ್ತು ಹೊರಾಂಗಣ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ರಕ್ತಹೀನತೆ ವಿರುದ್ಧ ಎರಡು ವರ್ಷಗಳ ಅಭಿಯಾನ:
ಕಲ್ಯಾಣ ಕರ್ನಾಟಕದಲ್ಲಿ ರಕ್ತಹೀನತೆ ಪ್ರಮಾಣ ಕಡಿಮೆ ಮಾಡಲು ಮುಂದಿನ ಎರಡು ವರ್ಷಗಳ ಕಾಲ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು. ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಆದ್ಯತೆ ನೀಡಲಾಗುವುದು. ಗರ್ಭಿಣಿಯರು, ಹದಿಹರೆಯದವರು ಹಾಗೂ ಹಾಲುಣಿಸುವ ತಾಯಂದಿರ ಮೇಲೆ ವಿಶೇಷ ಗಮನ ಹರಿಸಲಾಗುವುದು ಎಂದರು.
ರೈತರ ಆದಾಯ ಹೆಚ್ಚಿಸುವ ಯೋಜನೆಗಳನ್ನು ರೂಪಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ 7 ಸಾವಿರ ಕೋಟಿ ರೂ.ಮೊತ್ತದ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಮಹಿಳೆಯರ ಖಾತೆಗಳಿಗೆ 14,950 ಕೋಟಿ ರೂ.ಹಣ ನೀಡಲಾಗಿದೆ. ನಿರುದ್ಯೋಗ ಭತ್ಯೆಗಾಗಿ 382 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಯುವಕರಲ್ಲಿ ನಾಯಕತ್ವ ಗುಣ ಬೆಳೆಸಲು ಹಾಗೂ ಗ್ರಾಮೀಣ ಭಾಗದ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಪರಿಚಯಿಸಲು 10 ಸಾವಿರ ಯುವ ಸಂಘಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. ಸಣ್ಣ ಕೈಗಾರಿಕೆಗಳಿಗೆ 200 ಕೋಟಿ ರೂ. ನೆರವು ನೀಡಲಾಗಿದ್ದು, ನೂರಾರು ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಲಾಗಿದೆ ಎಂದರು.
ಮುಂದಿನ ಎರಡು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಾದ್ಯಂತ ‘ಕೋಟಿ ವೃಕ್ಷ ಅಭಿಯಾನ’ ನಡೆಸಿ ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
“ನವಕರ್ನಾಟಕ, ಸದೃಢ ಕರ್ನಾಟಕ ನಿರ್ಮಾಣ ಮಾಡುವುದು ನಮ್ಮ ಸಂಕಲ್ಪ. ನಮ್ಮೊಂದಿಗೆ ನೀವು, ನಿಮ್ಮೊಂದಿಗೆ ನಾವು ಎಂಬ ಸಂಕಲ್ಪದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ,” ಎಂದು ಕರೆ ನೀಡಿದರು.
ಇದಕ್ಕೂ ಮುನ್ನ 79ನೇ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವರಾದ ಪ್ರಿಯಾಂಕ್ ಖರ್ಗೆ, ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.






