ಕಲಬುರಗಿ | ತೊಗರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಧರಣಿ

ಕಲಬುರಗಿ: ಆಳಂದ ತಾಲೂಕಿನ ಪ್ರತೀ ಗ್ರಾಮ ಪಂಚಾಯತ್ ಗಳಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಿ ಕನಿಷ್ಠ ಬೆಂಬಲ ಬೆಲೆ 12,225 ರೂ.ಗೆ ಖರೀದಿಸಲು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಘಟಕದಿಂದ ತಾಲೂಕ ಆಡಳಿತ ಮುಂದೆ ಧರಣಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಲೋಹಾರ್ ಮಾತನಾಡಿ, ಬೆಂಬಲ ಬೆಲೆ ಸೇರಿ ಯಾವುದೇ ರೈತ ಪರ ಯೋಜನೆಗಳನ್ನು ಸರಕಾರ ಅನುಷ್ಠಾನಕ್ಕೆ ತರುತ್ತಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಕಾರ್ಯದರ್ಶಿ ಮೌಲಾಮುಲಾ ಮಾತನಾಡಿ, ಈ ವರ್ಷ ನೈಸರ್ಗಿಕ ವಿಕೋಪ ಮತ್ತು ತೊಗರಿಗೆ ನೆಟೆರೋಗ ಬಿದ್ದಿದ್ದರಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ನೆರವಿಗೆ ಧಾವಿಸಬೇಕಿದ್ದ ಕೇಂದ್ರ ಸರ್ಕಾರ ಅವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಿದ್ದು ಸರಿಯಲ್ಲ ಎಂದು ಆಕ್ರೋಶ ಹಾಕಿದರು.
ರೈತರ ಪರ ಬೇಡಿಕೆಗೆ ಒತ್ತಾಯಿಸಿ ಜಗಜಿತ್ ಸಿಂಗ್ ದಲ್ಲೆವಾಲ್ 50 ದಿನಗಳಿಂದ ಉಪವಾಸ ಸತ್ಯಾಗ್ರಹ ಕುಳಿತಿದ್ದರೂ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದವರು ದೂರಿದರು.
ರಾಜ್ಯ ಮತ್ತು ಕೇಂದ್ರ ಸರಕಾರ ತಲಾ ಎರಡು ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಿಸಿ ಪ್ರತಿ ಕ್ವಿಂಟಾಲ್ ತೊಗರಿಗೆ ಒಟ್ಟು 12,225 ರೂಪಾಯಿ ಒದಗಿಸಬೇಕು ಎಂದು ಒತ್ತಾಯಿಸಿದರು.
ದೇಶದ ರೈತರನ್ನು ಸಂಪೂರ್ಣವಾಗಿ ಸಶಕ್ತಗೊಳಿಸಲು ಅದಕ್ಕಾಗಿ ರೈತರ ಸಾಲ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಸಮಗ್ರವಾಗಿ ಜಾರಿಗೊಳಿಸಬೇಕು. ಈ ವಿಷಯದಲ್ಲಿ ಸರಕಾರ ಸ್ಪಂದಿಸದಿದ್ದಲ್ಲಿ ಜ.22ರಂದು ಕಲಬುರಗಿ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಗ್ರೇಟು ತಹಶೀಲ್ದಾರ್ ಬಿ.ಜಿ .ಕುದುರೆ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಿಸಾನ್ ಸಭಾ ತಾಲೂಕ ಅಧ್ಯಕ್ಷ ಚಂದ್ರಕಾoತ್ ಕೋಬ್ರೆ, ಹಿರಿಯ ಮುಖಂಡ ರವಿ ಪಾಟೀಲ್ ಆಳಂಗ, ಪ್ರಭಾಕರ್ ಚವಾಣ್, ಪ್ರಾಂತ ರೈತ ಸಂಘದ ಪ್ರಕಾಶ್ ಜಾನಿ ,ಅಮೀನ್ ಸಾಬ್ ಕಂಡು ವಾಲಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.







