ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮರು ಆಯ್ಕೆಯಾದರೆ ನಮ್ಮ ನಿರ್ಣಯ ತಿಳಿಸುತ್ತೇವೆ: ಯತ್ನಾಳ್
"ಯತ್ನಾಳ್ ರಾಜ್ಯಾಧ್ಯಕ್ಷ ಆಗಬೇಕು ಎಂಬ ಕೂಗಿದೆ, ಏನಾಗುತ್ತೋ ನೋಡೋಣ"

ಬಸನಗೌಡ ಪಾಟೀಲ್ ಯತ್ನಾಳ್
ಕಲಬುರಗಿ: ಒಂದು ವೇಳೆ ಬಿ.ವೈ.ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಿದರೆ, ನಮ್ಮ ನಿರ್ಣಯ ತಿಳಿಸುತ್ತೇವೆ. ನಮ್ಮ ಹೋರಾಟವಂತೂ ಮುಂದುವರಿಯುತ್ತದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಪಕ್ಷದ ವರಿಷ್ಠರನ್ನು ಎಚ್ಚರಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ಬಳಿಯ ಬೀರನಳ್ಳಿ ಕ್ರಾಸ್ನಲ್ಲಿ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದಾಗಿ ವಿಜಯೇಂದ್ರರ ಹೇಳಿಕೆ ಬಗ್ಗೆ ಈ ರೀತಿ ಪ್ರತಿಕ್ರಿಯಿಸಿದರು.
ಚುನಾವಣೆ ನಡೆದು ವಿಜಯೇಂದ್ರ ಮತ್ತೊಮ್ಮೆ ರಾಜ್ಯಾಧ್ಯಕ್ಷ ಆಗಲಿ. ಬೇಡ ಅಂದವರಾರು.? ಅಲ್ಲಿವರೆಗೂ ನನಗೆ ಓಟ್ ಹಾಕಿ ನನಗೆ ಓಟ್ ಹಾಕಿ ಅಂತ ಕೈ ಮುಗಿದು ಅವರು ಓಡಾಡಬೇಕಲ್ವಾ.? ಕೆಲವರಿಗೆ ಕೈ ಮುಗಿಯೋದಾದರು ನಾವು ಕಲಿಸಿದ ಹಾಗೆ ಆಗುತ್ತದೆ ಎಂದು ಯತ್ನಾಳ್ ವ್ಯಂಗ್ಯವಾಡಿದರು
ಮಾಜಿ ಸಚಿವ ಶ್ರೀರಾಮುಲು ರಾಜ್ಯಾಧ್ಯಕ್ಷ ಆದರೆ ನಮ್ಮದೇನೂ ತಕರಾರಿಲ್ಲ. ಅವರೂ ನಮ್ಮವರೆ. ಅವರಾದರೆ, ನಮ್ಮ ಬೆಂಬಲ ಇರುತ್ತೆ. ರಾಜ್ಯದ ಎಲ್ಲಾ ಸಂಸದರು ನಮ್ಮ ಜೊತೆಗಿದ್ದಾರೆ. ವಿಜಯೇಂದ್ರ ಒಬ್ಬರನ್ನು ಬಿಟ್ಟು, ಯತ್ನಾಳ್ ರಾಜ್ಯಾಧ್ಯಕ್ಷ ಆಗಬೇಕು ಎಂಬ ಕೂಗಿದು, ಏನಾಗುತ್ತೋ ನೋಡೋಣ ಎಂದರು.
ಹೈಕಮಾಂಡ್ ಜಾತಿ ಲೆಕ್ಕಾಚಾರ ನೋಡಿ, ಅಭ್ಯರ್ಥಿ ಕಣಕ್ಕೆ
ನಮ್ಮ ಬಣದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದರ ಕುರಿತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇವೆ. ನಮ್ಮ ಪಕ್ಷದ ಹೈಕಮಾಂಡ್ ಜಾತಿ ಲೆಕ್ಕಾಚಾರ ನೋಡಿಕೊಂಡು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದ್ದು, ಅದೇ ಜಾತಿಯವರನ್ನು ನಾವು ಕೂಡಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವುದು ಖಂಡಿತ ಎಂದು ಯತ್ನಾಳ್ ಹೇಳಿದರು.
ದೇಶ-ವಿದೇಶದಲ್ಲಿ ಆಸ್ತಿ ಮಾಡಿಲ್ಲ:
ನಮಗೆ ಬೇರೆಯವರಂತೆ ದೇಶ ವಿದೇಶಗಳಲ್ಲಿ ಆಸ್ತಿ ಮಾಡಿಡುವ ಆಸಕ್ತಿ ಇಲ್ಲ. ವಿಜಯೇಂದ್ರ ದುಬೈನಲ್ಲಿ, ಸಿಂಗಾಪುರದಲ್ಲಿ ಆಸ್ತಿ ಮಾಡಿಟ್ಟು ಏನು ಮಾಡುತ್ತಾನೆ. ಜನರಿಗೆ ದಾನ ಕೊಟ್ಟರೆ, ಒಳ್ಳೆಯದಾಗುತ್ತೆ. ನಮಗೆ ಒಳ್ಳಯದಾಗಲಿ ಎಂದು ವಿಜಯೇಂದ್ರ ಅಂತಾನಾ.? ಯಾರಿಗಾದರು, ಒಳ್ಳೆಯದಾಗಲಿ ಅನ್ನೋದು ಅವರಿಂದ ಹೇಳಲು ಸಾಧ್ಯವೇ ಇಲ್ಲ ಎಂದು ಯತ್ನಾಳ್ ಖಾರವಾಗಿ ಹೇಳಿದರು.