ಕಲಬುರಗಿ | ಶಾಲಾ ವಾಹನ ಪಲ್ಟಿ: ವಿದ್ಯಾರ್ಥಿಗಳು ಅಪಾಯದಿಂದ ಪಾರು

ಕಲಬುರಗಿ : ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವಾಗ ರಸ್ತೆ ಪಕ್ಕದಲ್ಲಿ ನಿಂತಿದ್ದ ಆಟೋಗೆ ಢಿಕ್ಕಿ ಹೊಡೆದ ಪರಿಣಾಮ ಶಾಲಾ ಬಸ್‌ವೊಂದು ಪಲ್ಟಿಯಾಗಿರುವ ಘಟನೆ ಅಫಜಲಪುರ ತಾಲ್ಲೂಕಿನ ಬಂಕಲಗಾ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಈ ಸಂದರ್ಭಲ್ಲಿ ಬಸ್ಸಿನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
ಅಫಜಲಪುರ ತಾಲೂಕಿನ ಶಿರವಾಳ ಗ್ರಾಮದ ಶ್ರೀ ವೀರ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ವಾಹನ, ಶಾಲೆ ಮುಗಿದ ಬಳಿಕ ಮಕ್ಕಳನ್ನು ಕರೆದುಕೊಂಡು ಉಡಚಾಣ ಮತ್ತು ಉಡಚಾಣ ಹಟ್ಟಿ ಗ್ರಾಮಕ್ಕೆ ಹೋಗುತ್ತಿರುವಾಗ ಚಾಲಕನ ನಿರ್ಲಕ್ಷ್ಯದಿಂದಾಗಿ ಬಂಕಲಗಾ ಬಸ್ ನಿಲ್ದಾಣದ ಎದುರಲ್ಲೇ ಬಸ್ ಪಲ್ಟಿ ಹೊಡೆದಿದೆ ಎನ್ನಲಾಗಿದೆ.
ತಕ್ಷಣವೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಾರ್ವಜನಿಕರು ದೌಡಾಯಿಸಿ ಶಾಲಾ ವಾಹನದ ಹಿಂದೆ ಮತ್ತು ಮುಂದಿನ ಎರಡೂ ಕಡೆಯ ಗ್ಲಾಸ್ ಒಡೆದು ಮಕ್ಕಳನ್ನು ಸುರಕ್ಷಿತವಾಗಿ ಹೊರಗಡೆ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಸಂಗಮೇಶ್ವರ ಸಂಸ್ಥೆಯ ಶಾಲಾ ವಾಹನ ಪಲ್ಟಿಯಾಗಿ ಆರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇನ್ನೂಳಿದ ಮಕ್ಕಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿದು ಬಂದಿದೆ. ತಾಲೂಕಿನಲ್ಲಿರುವ ಖಾಸಗಿ ಶಾಲೆಗಳ ಮುಖ್ಯಸ್ಥರಿಗೆ ಈಗಾಗಲೇ ನೋಟಿಸ್ ನೀಡಿ ಮಾಹಿತಿ ಪಡೆಯಲಾಗಿದೆ. ಶಿಕ್ಷಣ ಇಲಾಖೆಯ ನಿಯಮಗಳು ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಯುವರಾಜ ಗಾಡಿ (ಕ್ಷೇತ್ರ ಶಿಕ್ಷಣಾಧಿಕಾರಿ ಅಫಜಲಪುರ)







