ಕಲಬುರಗಿ: ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾ ಮಹೋತ್ಸವಕ್ಕೆ ಚಾಲನೆ

ಕಲಬುರಗಿ: ಮೇಜರ್ ಧ್ಯಾನ್ಚಂದ್ ರಾಷ್ಟ್ರೀಯ ಕ್ರೀಡಾ ಮಹೋತ್ಸವ ಅಂಗವಾಗಿ ನಗರದ ಕೆ.ಎಚ್.ಬಿ. ಅಕ್ಕಮಹಾದೇವಿ ಕಾಲನಿಯ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಅಂತರ್ ಜಿಲ್ಲಾ 16 ವರ್ಷದೊಳಗಿನ ಬಾಲಕ/ಬಾಲಕಿಯರ ಆಹ್ವಾನಿತ ಬಾಸ್ಕೆಟ್ಬಾಲ್ ಲೀಗ್ 2 ಚಾಂಪಿಯನ್ ಶಿಪ್ ಗೆ ಭಾರತೀಯ ದೈಹಿಕ ಶಿಕ್ಷಣ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಪ್ರತಾಪ ಸಿಂಗ್ ತಿವಾರಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, 'ಕಲ್ಯಾಣ ಕರ್ನಾಟಕ ಭಾಗದ ಶಾಲಾಮಟ್ಟದ ಪ್ರತಿಭೆಗಳನ್ನು ಬಾಸ್ಕೆಟ್ ಬಾಲ್ ಗುರುತಿಸುವ ಉದ್ದೇಶದಿಂದ ಬಾಸ್ಕೆಟ್ಬಾಲ್ ಲೀಗ್ ಚಾಂಪಿಯನ್ ಶಿಪ್ ಆಯೋಜಿಸಿದ್ದು ಶ್ಲಾಘನೀಯ' ಎಂದರು.
ಗುಲಬರ್ಗಾ ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಶನ್ ವತಿಯಿಂದ ಭಾರತೀಯ ದೈಹಿಕ ಶಿಕ್ಷಣ ಸಂಸ್ಥೆ ಜಿಲ್ಲಾ ಮತ್ತು ರಾಜ್ಯ ಶಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಈ ಟೂರ್ನಿ ಆಯೋಜಿಸಲಾಗಿದೆ. ಈ ನಾಕೌಟ್ ಕಂ ಲೀಗ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 13 ಬಾಲಕರ ಮತ್ತು 8 ಬಾಲಕಿಯರ (ಕಲಬುರಗಿ- ಬೀದರ್ ಜಿಲ್ಲೆಯ ಶಾಲೆಗಳು) ತಂಡಗಳಿಂದ ಸುಮಾರು 250 ಆಟಗಾರರು ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟು ಸಿರಾಜುದ್ದೀನ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಗೋನಾಯಕ್, ಡಾ.ಅಂಬರೀಶ ವಿ.ಬಿರಾದಾರ, ಅಮೃತ್ ಅಷ್ಟಗಿ, ಸಂಜಯ ಬಾಣದ, ಭೀಮಾಶಂಕರ ದಿವಟೆ, ಸುಶೀಲಕುಮಾರ ಮಾಮಡಿ, ಶ್ರೀಕಾಂತ್ ನಿರುಣಿ, ಧರ್ಮರಾಜ ಹೇರೂರು, ರಮೇಶ್, ಗುಲಬರ್ಗಾ ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ಉದನೂರ್, ಕಾರ್ಯದರ್ಶಿ ಚಂದ್ರಕಾಂತ ಶಿರೋಳ್ಳಿ, ಉಪಾಧ್ಯಕ್ಷ ರಾಮೇಶ್ವರ, ತರಬೇತುದಾರ ಪ್ರವೀಣ್ ಪುಣೆ ಹಾಗೂ ಶಂಕರ್ ಸೂರೆ ಉಪಸ್ಥಿತರಿದ್ದರು.







