ದೇಶದಲ್ಲಿ ಸುದ್ದಿಕಳ್ಳತನ ನಡೆಯುತ್ತಿದೆ: ಪತ್ರಕರ್ತ ಸಿದ್ಧಾರ್ಥ್ ವರದರಾಜನ್

ಕಲಬುರಗಿ : ಮತಗಳ್ಳತನದ ಪದ ಬಹಳ ಹೆಚ್ಚಾಗಿ ಕೇಳಿ ಬರುತ್ತದೆ. ಮತಗಳ್ಳತನ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅದಕ್ಕೆ ಮುಂಚಿತವಾಗಿ ಸುದ್ದಿಕಳ್ಳತನ ಈ ದೇಶದಲ್ಲಿ ನಡೆದಿದೆ. 2014ರಿಂದ ಇದು ದೇಶದಲ್ಲಿ ಪ್ರಾರಂಭವಾಗುದೆ. ಜನರಿಂದ ಸುದ್ದಿಯನ್ನು ದೂರ ಇರುವ ಕೆಲಸ ನಡೆಯುತ್ತಿದೆ. ಜನರಿಗೆ ಬೇಕಾದ ಸುದ್ದಿ ದೂರ ಇರುವ ಕೆಲಸ ನಡೆಯುತ್ತಿತ್ತು. ನಮ್ಮ ನಾಯಕರ ಬಳಿ ಜನರ ಸಮಸ್ಯೆಗಳನ್ನು ಕೊಂಡೊಯ್ಯಲು ಕಷ್ಟವಾಗುತ್ತಿದೆ, ಮುಖ್ಯವಾಹಿನಿಗಳು ಮಾಯವಾಗುತ್ತಿದೆ ಎಂದು thewire.in ನ ಸಂಪಾದಕ ಸಿದ್ದಾರ್ಥ್ ವರದರಾಜನ್ ಹೇಳಿದರು.
ಕಲಬುರಗಿಯಲ್ಲಿ ʼವಾರ್ತಾಭಾರತಿʼ ಪತ್ರಿಕೆಯ ಕಲ್ಯಾಣ ಕರ್ನಾಟಕ ಆವೃತ್ತಿಯ ಬಿಡುಗಡೆ ಮಾಡಿ ಮಾತನಾಡಿದ ಸಿದ್ದಾರ್ಥ್ ವರದರಾಜನ್, ಸುದ್ದಿಯ ಯುದ್ದಭೂಮಿಯಲ್ಲಿ ದೊಡ್ಡ ಮಾಧ್ಯಮಗಳು ಜನರಿಗೆ ತಲುಪಬೇಕಾದ ಸುದ್ದಿ ತಲುಪಿಸದೇ ದೂರ ಉಳಿದವು. ಅವೆಲ್ಲವೂ ಅಗತ್ಯ ವಿರುವ ಸಂದರ್ಭದಲ್ಲಿ ದೂರ ಇದ್ದಾಗ, ಹೊಸ ಮಾಧ್ಯಮಗಳ ಉದಯ ಅವಶ್ಯಕ. ಈ ಮಾಧ್ಯಮಗಳು ಸಣ್ಣವೂ ಆಗಿರಬಹುದು. ವಾರ್ತಾಭಾರತಿ ಆ ರೀತಿಯ ಒಂದು ಸಣ್ಣ, ಸ್ವತಂತ್ರ ಮಾದ್ಯಮ. ದೊಡ್ಡ ಮಾಧ್ಯಮಗಳು ಈ ದೇಶದ ಜನರ ಜೀವನ, ಸಂಸ್ಕೃತಿ, ಪ್ರಜಾಪ್ರಭುತ್ವವನ್ನು ನಾಶ ಮಾಡಲು ಕೆಲಸ ಮಾಡುತ್ತಿವೆ. ಚಿಕ್ಕವಾದರೂ ಸ್ವತಂತ್ರ ಪತ್ರಿಕೋದ್ಯಮ ಪ್ರಬಲ ಪ್ರತಿರೋಧ ತೋರುತ್ತಿವೆ. ಮೊದಲು ಮಂಗಳೂರಿನಲ್ಲಿ ಹುಟ್ಟಿ ಈಗ ಕಲ್ಯಾಣ ಕರ್ನಾಟಕದಲ್ಲೂ ವಾರ್ತಾಭಾರತಿ ಆವೃತಿ ಪ್ರಾರಂಭಿಸಿದೆ. ನಾವೀಗ ಒಂಟಿಯಲ್ಲ, ವಾರ್ತಾಭಾರತಿ ಜೊತೆಗಿದೆ ಎಂದು ಅವರು ಅಭಿಪ್ರಾಯಪಟ್ಟರು.







