ಜೆಸ್ಕಾಂನಿಂದ ಟೆಂಡರ್ ನಲ್ಲಿ ನಿಯಮ ಉಲ್ಲಂಘನೆಯ ವರದಿ ಆಧರಿಸಿ ಮುಂದಿನ ಕ್ರಮ : ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ

ಕೆ.ಜೆ.ಜಾರ್ಜ್
ಕಲಬುರಗಿ : ಬೆಂಗಳೂರಿನ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಆರ್.ಬೆನಕನಹಳ್ಳಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ನೀಡಿರುವ ವಿಚಾರಣಾ ವರದಿಗಳಲ್ಲಿ 254 ಆರೋಪಿತ ಸಿಬ್ಬಂದಿ ಪೈಕಿ 130 ಅಧಿಕಾರಿ ಮತ್ತು ನೌಕರರ ವಿರುದ್ಧದ ಆರೋಪಗಳು ಭಾಗಶಃ ರುಜುವಾತಾಗಿದೆ. ಉಳಿದ 124 ನೌಕರರ ವಿರುದ್ಧದ ಆರೋಪಗಳು ರುಜುವಾತಾಗಿರುವುದಿಲ್ಲ. ಈಗ ಮತ್ತೊಂದು ಬಾರಿ ಇನ್ಸ್ ಪೆಕ್ಷನ್ ವರದಿ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು.
ಮೇಲ್ಮನೆಯಲ್ಲಿ ಬುಧವಾರ ಭೋಜನ ವಿರಾಮದ ನಂತರ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು, 2014-15ನೇ ಸಾಲಿನಲ್ಲಿ ಜೆಸ್ಕಾಂ ವತಿಯಿಂದ ಕೈಗೊಂಡಿದ್ದ ಏರಿಯಲ್ ಪ್ಯೂಸ್ ಬೋರ್ಡ್, ತಂತಿ ಬೇಲಿ ಅಳವಡಿಸುವ ತುಂಡು ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದಂತೆ ಮರು ತನಿಖೆಗೆ ಹೊರಡಿಸಿರುವ ಆದೇಶ ಹಿಂಪಡೆದು ತಪಿತಸ್ಥರಲ್ಲದ ಅಧಿಕಾರಿ, ನೌಕರರಿಗೆ ನ್ಯಾಯ ಒದಗಿಸುವಂತೆ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಲಿಖಿತವಾಗಿ ಉತ್ತರಿಸಿದರು.
ಜೆಸ್ಕಾಂನ ಏಳು ವಿಭಾಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣಾ ಪರಿವರ್ತಕ ಕಂಬಗಳಿಗೆ ಏರಿಯಲ್ ಪ್ಯೂಸ್ ಬೋರ್ಡ್ಗಳ ಅಳವಡಿಕೆಗೆ 80 ಕೋಟಿ ರೂ. ಟೆಂಡರ್ ಆಗಿದೆ. ಇಲ್ಲಿ ಕಾಮಗಾರಿಗಳ ನಿರ್ವಹಣೆಯಲ್ಲಿ ನಿಯಮಾವಳಿ ಉಲ್ಲಂಘಿಸಿ ಜೆಸ್ಕಾಂ ಕಂಪನಿಗೆ ಸುಮಾರು 43.17 ಕೋಟಿ ರೂ. ಆರ್ಥಿಕ ನಷ್ಟ ಉಂಟಾಗಿದೆ. ಕರ್ತವ್ಯ ಲೋಪವೆಸಗಿದ ಆರೋಪದ ಹಿನ್ನೆಲೆಯಲ್ಲಿ 254 ಅಧಿಕಾರಿ ಮತ್ತು ನೌಕರರಿಗೆ ಒಟ್ಟು 31 ಆರೋಪಣಾ ಪಟ್ಟಿಗಳನ್ನು ಜಾರಿಗೊಳಿಸಲಾಗಿದೆ. ಹೀಗಾಗಿ, ವರದಿ ಆಧರಿಸಿ ತಪ್ಪುವೆಸಗದಿರುವವರಿಗೆ ಅನ್ಯಾಯವಾಗದಂತೆ ಗಮನ ಹರಿಸುವುದಾಗಿ ಪುನರುಚ್ಚಿಸಿದರು.