ಸಿಎಂ ಬದಲಾವಣೆಗೆ ದಿನಾಂಕ ನಿಗದಿ ಇಲ್ಲ, ಹೈಕಮಾಂಡ್ ನಿರ್ಧಾರವೇ ಅಂತಿಮ : ಡಾ.ಮಲ್ಲಿಕಾರ್ಜುನ್ ಖರ್ಗೆ

ಡಾ.ಮಲ್ಲಿಕಾರ್ಜುನ್ ಖರ್ಗೆ
ಕಲಬುರಗಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಾಗಿ ಸದ್ಯಕ್ಕೆ ಯಾವುದೇ ಚರ್ಚೆಗಳು ನಡೆದಿಲ್ಲ, ಅದಕ್ಕೆ ದಿನಾಂಕವೂ ನಿಗದಿಯಾಗಿಲ್ಲ. ಈ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತು ಪದೇ ಪದೇ ಪ್ರಶ್ನೆ ಕೇಳಬೇಡಿ. ಈ ಬಗ್ಗೆ ಯಾವುದೇ ಊಹಾಪೋಹಗಳನ್ನು ಮಾಧ್ಯಮಗಳು ಸೃಷ್ಟಿಸಬಾರದು ಎಂದು ಮನವಿ ಮಾಡಿದರು.
ಸಿಎಂ ಬದಲಾವಣೆಯ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಸಮಯ ನಿಗದಿಯಾಗದೆ ಈ ಕ್ಷಣದಲ್ಲೇ ಬದಲಾವಣೆ ಆಗುತ್ತದೆಯೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ನಾನು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಿಲಿಂಡರ್ ದರ ಏರಿಕೆಗೆ ಆಕ್ರೋಶ :
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ ಅವರು, ವಾಣಿಜ್ಯ ಸಿಲಿಂಡರ್ ದರ ಏರಿಕೆಯನ್ನು ತೀವ್ರವಾಗಿ ಖಂಡಿಸಿದರು. ಪ್ರಧಾನಿ ನರೇಂದ್ರ ಮೋದಿ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ರಾತ್ರೋರಾತ್ರಿ ವಾಣಿಜ್ಯ ಸಿಲಿಂಡರ್ ದರ 993 ರೂ. ಗೆ ಏರಿಸಲಾಗಿದೆ ಎಂದು ಟೀಕಿಸಿದರು.
ಪ್ರಪಂಚಕ್ಕೆ ಯುದ್ಧ ಬೇಡ, ಬುದ್ಧ ಬೇಕು :
ಗೌತಮ ಬುದ್ಧರ ಅಷ್ಟಾಂಗ ಮಾರ್ಗಗಳು ಇಂದಿಗೂ ವಿಶ್ವಕ್ಕೆ ಪ್ರೇರಣೆಯಾಗಿವೆ. ಇದೇ ಕಾರಣಕ್ಕೆ ಅನೇಕ ದೇಶಗಳಲ್ಲಿ ಬುದ್ಧ ಪೂರ್ಣಿಮೆ ಆಚರಿಸಲಾಗುತ್ತಿದೆ ಎಂದು ಖರ್ಗೆ ಹೇಳಿದರು.
ಜಾಗತಿಕ ಯುದ್ಧಗಳು ತಕ್ಷಣ ನಿಲ್ಲಬೇಕು. ಎರಡು ದೇಶಗಳ ನಡುವಿನ ಕಲಹವು ನೂರಾರು ದೇಶಗಳಿಗೆ ಸಮಸ್ಯೆ ಉಂಟುಮಾಡುತ್ತದೆ. ಪ್ರಪಂಚಕ್ಕೆ ಯುದ್ಧಗಳ ಬದಲಾಗಿ ಬುದ್ಧನ ಚಿಂತನೆಗಳು ಅಗತ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಮಿಕ ಕಾಯ್ದೆಗಳು ದುರ್ಬಲ
ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿದ ಕಾರ್ಮಿಕ ಕಾಯ್ದೆಗಳು ಬಹಳ ಮಟ್ಟಿಗೆ ತಿರುಚಲ್ಪಟ್ಟಿವೆ. ಕಾರ್ಮಿಕರ ರಕ್ಷಣೆಗೆ ಅಗತ್ಯವಾದ ಕಾನೂನುಗಳನ್ನು ದುರ್ಬಲಗೊಳಿಸಲಾಗಿದ್ದು, ಕಾರ್ಪೋರೇಟ್ ಕಂಪನಿಗಳು ಸ್ವಚ್ಛಂದವಾಗಿ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.
ಯುಪಿಎ ಸರ್ಕಾರ ಜಾರಿಗೆ ತಂದ ಮನರೇಗಾ ಯೋಜನೆ ಬಡವರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಖರ್ಗೆ ಟೀಕಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಎಂಎಲ್ಸಿ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ್, ಸೇರಿದಂತೆ ಹಲವರು ಇದ್ದರು.






