ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ | ಕರಡು ಮತದಾರರ ಪಟ್ಟಿ ಪ್ರಕಟ ; ಆಕ್ಷೇಪಣೆ ಆಹ್ವಾನ

ಕಲಬುರಗಿ : ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಗೆ ಅನುಗುಣವಾಗಿ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 25ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಂಬಂಧಪಟ್ಟ ಮತದಾರರು ಲಿಖಿತವಾಗಿ ಆಯಾ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಡಿ.10 ರೊಳಗಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರರ ನೋಂದಣಿ ಅಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳು ಆದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಝಹೀರಾ ನಸೀಮ ಅವರು ತಿಳಿಸಿದ್ದಾರೆ.
ಸದರಿ ಕರಡು ಮತದಾರರ ಪಟ್ಟಿಯ ಭೌತಿಕ ಪ್ರತಿಯು ಸಂಬಂಧಪಟ್ಟ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಲಭ್ಯವಿದ್ದು, ಮತದಾರರು ಪರಿಶೀಲಿಸಿಕೊಳ್ಳಬಹುದಾಗಿದೆ. ಇದನ್ನು ಹೊರತುಪಡಿಸಿ ಸರಕಾರದ ಅಧಿಕೃತ ಅಂರ್ತಜಾಲದಲ್ಲಿಯೂ ಸಹ ಮಾಹಿತಿಗಾಗಿ ಲಭ್ಯವಿದೆ. ಇದನ್ನು ಮತದಾರರು ಅವಲೋಕಿಸಬಹುದಾಗಿದೆ. ಇದೊಂದು ನಿರಂತರ ನೋಂದಣಿ ಪ್ರಕ್ರಿಯೆಯಾಗಿರುವ ಹಿನ್ನೆಲೆಯಲ್ಲಿ ಅರ್ಹ ಮತದಾರರು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಅವಶ್ಯಕ ದಾಖಲೆಗಳೊಂದಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಝಹೀರಾ ನಸೀಮ ಹೇಳಿದರು.







