371 ‘ಜೆ’ ಸಮರ್ಪಕ ಜಾರಿಗೆ ಅಧಿಕಾರಿಗಳು ಬದ್ಧರಾಗಬೇಕು : ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ 371 ‘ಜೆ’ ಅಡಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಕಲ್ಪಿಸಿರುವ ಮೀಸಲಾತಿ ನಿಯಮಗಳ ಸಮರ್ಪಕ ಜಾರಿಗೆ ಅಧಿಕಾರಿಗಳು ಆಸಕ್ತಿ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ವಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಉಪ ಸಮಿತಿ ವರದಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಗತಿ ಪರಿಶೀಲನಾ ಸಭೆಗಳಿಗೆ ಇಲಾಖಾ ಮುಖ್ಯಸ್ಥರು ಹಾಗೂ ಕಾರ್ಯದರ್ಶಿಗಳಿಗಿಂತ ಮೇಲ್ಪಟ್ಟ ಜವಾಬ್ದಾರಿಯುತ ಅಧಿಕಾರಿಗಳು ಖುದ್ದಾಗಿ ಹಾಜರಾಗಬೇಕು. ಅಭಿವೃದ್ಧಿಯಲ್ಲಿ ತಾರತಮ್ಯ ಹೋಗಲಾಡಿಸಬೇಕು. ಅನೇಕ ಬಾರಿ ಸುತ್ತೋಲೆ ಕಳುಹಿಸಿದರೂ ಕೆಲ ಇಲಾಖೆಗಳ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೇ ನಿರ್ಲಕ್ಷಿಸುತ್ತಿರುವುದನ್ನು ಸಂಪುಟ ಉಪಸಮಿತಿ ಗಂಭೀರವಾಗಿ ಪರಿಗಣಿಸಿದೆ ಎಂದು ಎಚ್ಚರಿಸಿದರು.
ಇನ್ನು ಮುಂದೆ ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ಸಭೆಗಳನ್ನು ಆಯ್ದ ಇಲಾಖೆಗಳೊಂದಿಗೆ ನಡೆಸಲಾಗುವುದು. ಸಭೆಗೆ ಕಡ್ಡಾಯವಾಗಿ ಸರಕಾರದ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರ ಹಂತದ ಅಧಿಕಾರಿಗಳು ಭಾಗವಹಿಸಬೇಕು. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುವ ಪೊಲೀಸ್ ಮತ್ತು ಇತರೆ ಇಲಾಖೆಗಳು ನೇಮಕಾತಿ ಆದೇಶಗಳನ್ನು ಅಭ್ಯರ್ಥಿಗಳಿಗೆ ನೀಡಿ ಸೇವೆಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸ್ಥಳೀಯ ಮತ್ತು ಉಳಿಕೆ ಮಾತೃವೃಂದದ ಸಂಯುಕ್ತ ಜೇಷ್ಠತಾ ಪಟ್ಟಿಯನ್ನು ಎಲ್ಲಾ ಇಲಾಖೆಗಳು ಹೊರಡಿಸಬೇಕು. ಈ ವಿಷಯದಲ್ಲಿ ನ್ಯಾಯಲಯದ ಆದೇಶ ಸ್ಪಷ್ಟವಾಗಿದೆ. ಮಾಸಾಂತ್ಯದೊಳಗೆ ಆದೇಶ ಹೊರಡಿಸಿ ಗೊಂದಲ ನಿವಾರಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿ ಹಾಗೂ ಮುಂಭಡ್ತಿಗೆ ಸಂಬಂಧಿಸಿದಂತೆ 2023ರ ಸುತ್ತೋಲೆ ಮಾತ್ರ ಜಾರಿಯಲ್ಲಿದೆ. ಅದಕ್ಕೂ ಹಿಂದಿನ ಎಲ್ಲ ಹಳೆಯ ಆದೇಶಗಳನ್ನು ಹಿಂಪಡೆಯಲಾಗಿದೆ. ಅನಗತ್ಯವಾಗಿ ಸ್ಪಷ್ಟೀಕರಣ, ಮಾರ್ಗದರ್ಶನ ಕೋರಿ ಪತ್ರ ಬರೆದು ಕಾಲಹರಣ ಮಾಡಬಾರದು. ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲಿಯೇ ನೇರ ನೇಮಕಾತಿಗೆ ಸೇರಿದ ಸುಮಾರು 12 ಸಾವಿರ ಹಾಗೂ ಮುಂಬಡ್ತಿಗೆ ಮೀಸಲಿಟ್ಟ ಸುಮಾರು 9 ಸಾವಿರ ಹುದ್ದೆಗಳು ಖಾಲಿ ಇವೆ.
ಈಗಾಗಲೇ 5,267 ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುತ್ತಿದೆ. ಉಳಿದ 6 ಸಾವಿರ ಹುದ್ದೆಗಳಿಗೂ ನೇರ ನೇಮಕಾತಿ ಮಾಡಿಕೊಳ್ಳಬೇಕು. ಯಾವುದೇ ಇಲಾಖೆಯು ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ನೇಮಕಾತಿಗೆ ಮುನ್ನ ಆರ್ಥಿಕ ಇಲಾಖೆಯ ಸಹಮತಿ ಪಡೆಯುವ ಅಗತ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸರಕಾರದ ಆದೇಶವೂ ಇದೆ. ಶಿಕ್ಷಣ, ಆರೋಗ್ಯ, ಪೊಲೀಸ್, ಸಾರಿಗೆ, ಇಂಧನ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಖಾಲಿ ಹುದ್ದೆಗಳನ್ನು ಹೊಂದಿರುವ ಇಲಾಖೆಗಳು ನೇಮಕಾತಿಗೆ ತ್ವರಿತ ಕ್ರಮ ವಹಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿ, ಮುಂಭಡ್ತಿಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳು ತ್ವರಿತ ವಿಲೇವಾರಿಗೆ ಕಾನೂನು ಸಚಿವರು ಹಾಗೂ ಅಡ್ವೋಕೇಟ್ ಜನರಲ್ ಜತೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಸರಕಾರವು ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಸ ಇಂಜಿನಿಯರಿಂಗ್ ಕಾಲೇಜುಗಳು, ವಸತಿ ಶಾಲೆ, ಹಾಸ್ಟೆಲ್ಗಳನ್ನು ಮಂಜೂರು ಮಾಡಿದೆ. ಅದಕ್ಕನುಗುಣವಾಗಿ ಹುದ್ದೆಗಳನ್ನು ಸೃಜಿಸಿ ನೇಮಕಾತಿಗೆ ಕ್ರಮವಹಿಸಬೇಕು. ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಗತ್ಯವಿರುವಲ್ಲೆಎಲ್ಲ ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಕ್ರಮವಹಿಸಬೇಕು. 371 (ಜೆ) ಅಡಿ ಹೊರಡಿಸಿರುವ ಆದೇಶಗಳ ಜಾರಿ ಮತ್ತು ಸಂಪುಟ ಉಪಸಮಿತಿ ಸಭೆಗೆ ಗೈರು ಹಾಜರಾಗುವ ಇಲಾಖೆಗಳ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಸೇರಿದಂತೆ ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು, ಸರಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಮತ್ತಿತರರು ಸಭೆಯಲ್ಲಿ ಹಾಜರಿದ್ದರು.







