ಒನಕೆ ಓಬವ್ವ ಅವರ ತ್ಯಾಗ, ಧೈರ್ಯ ಮಹಿಳೆಯರಿಗೆ ಸ್ಫೂರ್ತಿಯ ಸಾಹಸಗಾಥೆ: ಶಾಸಕ ಅಲ್ಲಮಪ್ರಭು ಪಾಟೀಲ್

ಕಲಬುರಗಿ; ಸಾಮಾನ್ಯ ಕುಟುಂಬದಲ್ಲಿ ಜನಿಸಿದರೂ, ಚಿತ್ರದುರ್ಗದ ಕೋಟೆಯ ಮೇಲೆ ಹೈದರಾಲಿಯ ಸೈನಿಕರು ರಹಸ್ಯವಾಗಿ ನುಸುಳಿದಾಗ ಮನೆಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿ ಬಳಸಿ ಎದೆಗುಂದದೆ ಮಾತೃಭೂಮಿಯ ರಕ್ಷಣೆಗಾಗಿ ಹೋರಾಡಿದ ಓಬವ್ವಳ ಸಾಹಸ, ತ್ಯಾಗ ಅನನ್ಯವಾದುದು ಎಂದು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂ ಪ್ರಭು ಪಾಟೀಲ್ ಅವರು ಶ್ಲಾಘಿಸಿದರು.
ಬುಧವಾರ, ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ಕಟ್ಟಡದ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಅಲ್ಲಂ ಪ್ರಭು ಪಾಟೀಲ್ ಮಾತನಾಡಿದರು.
ತಹಸೀಲ್ದಾರ್ ಶಿವಪ್ರಭು ಹಿರೇಮಠ ಅವರು ವೀರ ವನತೆಯರ ಇತಿಹಾಸ, ಅವರ ಶೌರ್ಯ ಮತ್ತು ಸಮಯಪ್ರಜ್ಞೆಯನ್ನು ನೆನೆಯುವುದರ ಜೊತೆಗೆ, ಅಂತಹ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುವುದರ ಪ್ರಾಮುಖ್ಯತೆಯನ್ನು ತಿಳಿಸಿದರು.
ಈ ವೇಳೆ ಹಿರಿಯ ಉಪನ್ಯಾಸಕ ಡಾ.ಪುಟ್ಟಮಣಿ ದೇವಿದಾಸ್ ಅವರು ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ.ಅ.ನಾಸಿ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಪರಮೇಶ್ವರ್, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರಾದ ಸಂಪತ್ ಕುಮಾರ ವಳಕೆರಿ, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಮೊರಗೆ, ಕನ್ನಡ ಅಭವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಸೇರಿದಂತೆ ಹಲವರು ಭಾಗವಹಿಸಿದ್ದರು.






