ವಾಡಿ | ವಿದ್ಯಾರ್ಥಿಗಳಿಗೆ ಶಾಲೆಯ ಶ್ರೇಷ್ಠ ಪ್ರತಿಭೆ ಪುರಸ್ಕಾರ

ಕಲಬುರಗಿ: ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ಹೆತ್ತ ಅಮ್ಮನಿಗೆ ಮಮ್ಮಿ ಎಂದು ಕರೆಯಲು ಕಲಿಸುತ್ತದೆ ಆಂಗ್ಲ ಶಿಕ್ಷಣ. ಮಮ್ಮಿ ಎಂದರೆ ಸತ್ತ ಹೆಣ. ಮಕ್ಕಳು ಅಮ್ಮಳನ್ನು ಮಮ್ಮಿ ಎಂದು ಕರೆದು ಸತ್ತ ಹೆಣಕ್ಕೆ ಹೋಲಿಸುವುದು ತರವೇ ಎಂದು ಸಾಹಿತಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಪ್ರಶ್ನಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ವಾಡಿ ವಲಯ ಘಟಕದಿಂದ ಶನಿವಾರ ಪಟ್ಟಣದ ಸಂತ ಅಂಬ್ರೋಸ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಹತ್ತನೇ ತರಗತಿಯಲ್ಲಿ ಶೇ.90 ಅಂಕಗಳನ್ನು ಪಡೆದು ಪ್ರತಿಭೆ ಮೆರೆದ ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ‘ಶಾಲೆಯ ಶ್ರೇಷ್ಠ ಪ್ರತಿಭೆ’ ಪ್ರಶಸ್ತಿ ಪುರಸ್ಕಾರ ಪ್ರಧಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಮಾತೃಭಾಷೆ ಕನ್ನಡದಲ್ಲಿ ಅಮ್ಮಾ ಎಂದು ಬಾಯಿತುಂಬ ಹೊಗಳಿದರೆ ಅದರೆ ಸೊಗಸೇಬೇರೆ. ಲಂಡನ್‍ನಲ್ಲಿ ಮಳೆ ಹೆಚ್ಚು ಬೀಳುವುದನ್ನು ಸಹಿಸದೆ ಕವಿಯೊಬ್ಬ ರೇನ್ ರೇನ್ ಗೋ ಅವೆ ಎಂದು ಪದ್ಯ ಬರೆದ. ಅದನ್ನೇ ನಮ್ಮ ಪಠ್ಯದಲ್ಲಿ ಸೇರಿಸಿ ಮಳೆಯೇ ಮಳೆಯೇ ಹೋಗು ಆಕಡೆ ಎಂದು ಕಲಿಸಬೇಕಾದಂತಹ ಪರಸ್ಥಿತಿ ಬಂದಿದೆ. ನಮ್ಮ ರೈತ ಮಳೆಗಾಗಿ ಮುಗಿಲು ನೋಡುತ್ತ ಕುಳಿತಿರುವಾಗ ‘ಬಾರೋ ಬಾರೋ ಮಳೆರಾಯ ತೊಗರಿ ಹೊಲಕ್ಕೆ ನೀರಿಲ್ಲ’ ಎಂಬ ಹೃದಯಗೀತೆ ಪಠ್ಯದಲ್ಲಿರಬೇಕಿದೆ. ಅರ್ಥವಿಲ್ಲದ ರೇನ್ ರೇನ್ ಗೋ ಅವೆ ಪದ್ಯವನ್ನು ಪಠ್ಯದಿಂದ ಕಿತ್ತೊಗೆಯಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ತಾಪುರ ಬಿಇಒ ಶಶಿಧರ ಬಿರಾದಾರ, ಕನ್ನಡಿಗರಿಗೆ ಮೊದಲು ಕನ್ನಡ ಭಾಷೆ ಮತ್ತು ಕನ್ನಡ ಶಿಕ್ಷಣದ ಮೇಲೆ ಅಭೀಮಾನ ಮೂಡಬೇಕು. ಯಾವೂದೇ ಭಾಷೆ ಕಲಿತರೂ ಕನ್ನಡ ಭಾಷೆ ಮಾತ್ರ ನಮ್ಮ ಆಡುಭಾಷೆಯಾಗಬೇಕು. ಮೋಬೈಲ್ ಮತ್ತು ಕಂಪ್ಯೂಟರ್ ಬಂದ ಮೇಲೆ ಜನರು ಬರೆಯೋದನ್ನೇ ಮರೆತಿದ್ದಾರೆ. ಕನ್ನಡ ಉಳಿಯಬೇಕು ಬೆಳೆಯಬೇಕು ಎಂದರೆ ಕನ್ನಡ ಪ್ರಬಂಧಗಳನ್ನು ಬರೆಯಿಸುವ ಅಗತ್ಯವಿದೆ. ವಾಡಿ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭೆಗಳನ್ನು ಗುರುತಿಸುವುದರ ಜತೆಗೆ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಕಸಾಪ ಅಧ್ಯಕ್ಷ ಸಿದ್ದಯ್ಯಶಾಸ್ತ್ರೀ ನಂದೂರಮಠ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್‍ಪಿ ಶಂಕರಗೌಡ ಪಾಟೀಲ, ಸಂಗೀತ ಕಲಾವಿದ ಮಲ್ಲು ಮಾಸ್ಟರ್ ಭಜಂತ್ರಿ, ಮುಖ್ಯಶಿಕ್ಷಕಿ ಸಿಸ್ಟರ್ ಗ್ರೇಸಿ ಮುಖ್ಯ ಅತಿಥಿಗಳಾಗಿದ್ದರು. ದಯಾನಂದ ಖಜೂರಿ ಪ್ರಾಸ್ತಾವಿಕ ನುಡಿದರು. ಬಿಆರ್‍ಪಿ ಮಲ್ಲಿಕಾರ್ಜುನ ಸೇಡಂ, ಅಂಬೇಡ್ಕರ್ ವಸತಿ ಶಾಲೆಯ ಉದಯ ಧರೆಣ್ಣವರ್, ಕಸಾಪ ಗೌರವ ಕಾರ್ಯದರ್ಶಿ ಚಂದ್ರು ಕರಣಿಕ, ದೇವಿಂದ್ರ ಕರದಳ್ಳಿ, ಮಲ್ಲಿಕಾರ್ಜುನ ಧರ್ಮಾಪುರ, ಜಗನ್ನಾಥ ಹಂದರ್ಕಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ರವಿ ಕೋಳಕೂರ ಸ್ವಾಗತಿಸಿದರು. ಮಡಿವಾಳಪ್ಪ ಹೇರೂರ ನಿರೂಪಿಸಿದರು. ಬಸವರಾಜ ಕೇಶ್ವಾರ ವಂದಿಸಿದರು. ಜನಕಲಾ ಸಮಿತಿಯ ಶೋಭಾ ನಿಂಬರ್ಗಾ ಅವರ ತಂಡದವರು ಕನ್ನಡಪರ ಹಾಡುಗಳನ್ನು ಹಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಮಣಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
“ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಕನುಸಗಳಿಗೆ ಹತ್ತನೇ ತರಗತಿಯ ಉತ್ತಮ ಅಂಕಗಳೇ ರೆಕ್ಕೆಪುಕ್ಕಗಳಾಗಿ ನಿಲ್ಲುತ್ತವೆ. ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಶಿಕ್ಷಣದ ಗುರಿ ಸಾಧನೆಗೆ ಸಹಾಯವಾದರೆ, ಜೀವನದಲ್ಲಿ ಉತ್ತಮ ಮನುಷ್ಯನಾಗಿ ರೂಪುಗೊಳ್ಳಲು ಮಾನವೀಯ ಮೌಲ್ಯಗಳು ಮೆದುಳಿಗೆ ತಾಕುವುದು ಅತ್ಯವಶ್ಯಕ. ಪಠ್ಯದ ಜತೆಗೆ ಸಾಹಿತ್ಯ ಕೃತಿಗಳ ಅಧ್ಯಯನಕ್ಕೂ ವಿದ್ಯಾರ್ಥಿಗಳು ಆಧ್ಯತೆ ನೀಡಬೇಕು. ಕಸಾಪದಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮನಸ್ಸುಗಳಿರುವುದು ಖುಷಿ ತಂದಿದೆ”.
-ಶಂಕರಗೌಡ ಪಾಟೀಲ. ಡಿವೈಎಸ್‍ಪಿ, ಉಪ ವಲಯ ಶಹಾಬಾದ.