ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ ಬೆಳೆಸಲು ಪೇಪರ್‌ಟ್ರಾನಿಕ್ಸ್ ಕಿಟ್ ವಿತರಣೆ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಪ್ರಾಯೋಗಿಕ ಕಲಿಕೆ ಹಾಗೂ ಮೂಲಭೂತ ಎಲೆಕ್ಟ್ರಾನಿಕ್ಸ್ ಜ್ಞಾನ ಬೆಳೆಸುವ ಉದ್ದೇಶದಿಂದ ಜಿಲ್ಲೆಯ ಶಾಲಾ ಮಕ್ಕಳಿಗೆ ಪೇಪರ್‌ಟ್ರಾನಿಕ್ಸ್ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಅರಿವು ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಕಲಬುರಗಿ ಸ್ಪೋರ್ಟ್ಸ್ ಹಬ್ಬದ ಲೋಗೊ ಮತ್ತು ವಿಡಿಯೊ ಅನಾವರಣ ಹಾಗೂ ಪೇಪರ್‌ಟ್ರಾನಿಕ್ಸ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಿ ಮಾತನಾಡಿದರು.
ಅಗಸ್ತ್ಯ ಫೌಂಡೇಶನ್ ಸಹಯೋಗದೊಂದಿಗೆ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಸೃಜನಶೀಲತೆ ಹೆಚ್ಚಿಸಲು ಈ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 70 ಶಾಲೆಗಳಿಗೆ 700 ಪೇಪರ್‌ಟ್ರಾನಿಕ್ಸ್ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಸ್ವತಃ ಪ್ರಯೋಗಗಳನ್ನು ಮಾಡುವ ಮೂಲಕ ಪ್ರಾಯೋಗಿಕ ಕಲಿಕೆ ಹಾಗೂ ಸಮಸ್ಯೆ ಪರಿಹರಿಸುವ ಕೌಶಲ್ಯ ಬೆಳೆಸಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದರು.
ಕೇವಲ ಪುರಾಣ ಮತ್ತು ಸಂಸ್ಕೃತಿಯಷ್ಟೇ ಅಲ್ಲದೆ, ಪ್ರಸ್ತುತ ಕಾಲಕ್ಕೆ ಅಗತ್ಯವಿರುವ ವೈಜ್ಞಾನಿಕ ದೃಷ್ಟಿಕೋನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಬೆಳೆಸಿಕೊಳ್ಳುವುದು ಸಂವಿಧಾನಾತ್ಮಕ ಕರ್ತವ್ಯ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಅಗಸ್ತ್ಯ ಸಂಸ್ಥೆಯ ಗೀತಾ ಪಾಟೀಲ್ ಮಾತನಾಡಿ, ದೇಶದ 23 ರಾಜ್ಯಗಳು ಹಾಗೂ ಕರ್ನಾಟಕದ 28 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನವು ಕಲ್ಯಾಣ ಕರ್ನಾಟಕದ 21 ವಿಜ್ಞಾನ ಕೇಂದ್ರಗಳ ಮೂಲಕ ಮಕ್ಕಳಲ್ಲಿ ಕುತೂಹಲ ಮತ್ತು ಸೃಜನಶೀಲತೆ ಬೆಳೆಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.
ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಹಾಗೂ ಪ್ರಯೋಗಗಳ ಮೂಲಕ ಕಲಿಕೆಯನ್ನು ಪ್ರೋತ್ಸಾಹಿಸಲು ‘ಆ, ಆಹಾ, ಹಾಹಾ’ ಎಂಬ ಪರಿಕಲ್ಪನೆಯಡಿ ಚಟುವಟಿಕೆಗಳನ್ನು ರೂಪಿಸಲಾಗಿದೆ. ಸರಳ ವಿದ್ಯುತ್, ಸರಣಿ ಮತ್ತು ಸಮಾಂತರ ಸಂಪರ್ಕ ಸೇರಿದಂತೆ ಮೂಲಭೂತ ವಿಜ್ಞಾನ ವಿಷಯಗಳನ್ನು ಸುಲಭವಾಗಿ ಅರ್ಥೈಸಲು ಪೇಪರ್‌ಟ್ರಾನಿಕ್ಸ್ ಕಿಟ್ ರೂಪಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಸಿಇಒ ಸಾಯಿ ಚಂದ್ರಶೇಖರ್ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ, ಎಲೆಕ್ಟ್ರಾನಿಕ್ಸ್‌ನ ಮಹತ್ವ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಆಸಕ್ತಿ ಮೂಡಿಸಲು 20 ಸ್ವಯಂ-ಕಲಿಕೆಯ ಚಟುವಟಿಕೆಗಳನ್ನು ಒಳಗೊಂಡ ಕಿಟ್ ಸಿದ್ಧಪಡಿಸಲಾಗಿದೆ. ಸ್ವತಃ ಪ್ರಯೋಗ ಮಾಡುವುದರಿಂದ ವಿಜ್ಞಾನ ವಿಷಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ ಎಂದರು.
ಪೇಪರ್‌ಟ್ರಾನಿಕ್ಸ್ ಕಿಟ್ ಎಂದರೇನು? :
ಪೇಪರ್‌ಟ್ರಾನಿಕ್ಸ್ ಒಂದು ಅನುಭವಾಧಾರಿತ ಎಲೆಕ್ಟ್ರಾನಿಕ್ಸ್ ಕಲಿಕಾ ಕಿಟ್ ಮತ್ತು ಕಾರ್ಯಪುಸ್ತಕ. ಕಾಗದ ಆಧಾರಿತ ವಿನ್ಯಾಸಗಳು, ತಾಮ್ರ ಅಥವಾ ಅಲ್ಯೂಮಿನಿಯಂ ಟೇಪ್, ಎಲ್‌ಇಡಿ, ಸ್ವಿಚ್, ಬ್ಯಾಟರಿ ಸೇರಿದಂತೆ ಮೂಲಭೂತ ಘಟಕಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ವಿದ್ಯುತ್ ವಲಯಗಳ ಪರಿಕಲ್ಪನೆಗಳನ್ನು ಪ್ರಾಯೋಗಿಕವಾಗಿ ಕಲಿಸುತ್ತದೆ.
ವಿದ್ಯಾರ್ಥಿಗಳು ಸ್ವತಃ ವಲಯಗಳನ್ನು ಜೋಡಿಸಿ, ಪರೀಕ್ಷಿಸಿ ಹಾಗೂ ವಿನ್ಯಾಸಗಳಲ್ಲಿ ಬದಲಾವಣೆ ಮಾಡುವ ಮೂಲಕ ‘ಮಾಡುತ್ತಾ ಕಲಿಯುವ’ ಅನುಭವ ಪಡೆಯುತ್ತಾರೆ.
ಕಿಟ್‌ನಲ್ಲಿ ಸರಳ, ಸರಣಿ ಮತ್ತು ಸಮಾಂತರ ವಲಯಗಳು, ಎರಡು-ಮಾರ್ಗದ ಸ್ವಿಚ್, ಟ್ರಾಫಿಕ್ ಲೈಟ್, ಪೊಟೆನ್ಷಿಯೊಮೀಟರ್, ವಾಹಕ-ಅವಾಹಕ ಪರೀಕ್ಷೆ, ವಾಟರ್ ಸ್ವಿಚ್, ಹೌಸ್‌ಬೆಲ್, ವಿದ್ಯುತ್ಕಾಂತೀಯತೆ, ಚಲನೆಯಿಂದ ಕಾರ್ಯನಿರ್ವಹಿಸುವ ಎಲ್‌ಇಡಿ, ಸೌರವಲಯ, ತಾಪಮಾನ ಸಂವೇದನೆ, ಭದ್ರತಾ ಅಲಾರಂ, ಆರ್‌ಜಿಬಿ ಲೈಟಿಂಗ್ ಹಾಗೂ ಬಣ್ಣ ಮಿಶ್ರಣ ಸೇರಿದಂತೆ ಹಲವು ಚಟುವಟಿಕೆಗಳಿವೆ.
ಇದರ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ ಕೌಶಲ್ಯ, ಸೃಜನಶೀಲತೆ, ನಾವೀನ್ಯತೆ ಹಾಗೂ STEM ಕೌಶಲ್ಯಗಳು ಬೆಳೆಸಲು ಸಹಕಾರಿಯಾಗಲಿದೆ.
ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ನಗರ ಪೊಲೀಸ್ ಅಯುಕ್ತ ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಡಿ.ಪಿ.ಐ ಶಂಕ್ರಮ ಢವಳಗಿ, ಯುವಸ ಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ ಇದ್ದರು. ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನೂರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.






