ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಎಂಬೆಡೆಡ್ ಎಡ್ಜ್ ಚಾಲೆಂಜ್ 2026’ ಹ್ಯಾಕಥಾನ್

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ಇಸಿಇ) ವಿಭಾಗದ ವತಿಯಿಂದ ಬೆಂಗಳೂರಿನ ಇನ್ಸಿನಿಯನ್ ಟೆಕ್ನಾಲಜೀಸ್ ಸಹಯೋಗದಲ್ಲಿ ‘ಎಂಬೆಡೆಡ್ ಎಡ್ಜ್ ಚಾಲೆಂಜ್ 2026’ ಹ್ಯಾಕಥಾನ್ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಇನ್ಸಿನಿಯನ್ ಟೆಕ್ನಾಲಜೀಸ್‌ನ ಹಿರಿಯ ಪ್ರಿನ್ಸಿಪಲ್ ಎಂಜಿನಿಯರ್ ಹಾಗೂ ಹಿರಿಯ ನಿರ್ದೇಶಕ ಡಾ. ಪ್ರಕಾಶ್ ಬಾಲಸುಬ್ರಮಣಿಯನ್ ಮತ್ತು ಅಸಿಸ್ಟೆಂಟ್ ಎಂಜಿನಿಯರ್ ಜಗನ್ ಸಿ. ಉದ್ಯಮ ತಜ್ಞರಾಗಿ ಭಾಗವಹಿಸಿದ್ದರು.
ಹ್ಯಾಕಥಾನ್ ಕುರಿತು ಮಾಹಿತಿ ನೀಡಿದ ಡಾ. ಪ್ರಕಾಶ್ ಬಾಲಸುಬ್ರಮಣಿಯನ್, ವಿದ್ಯಾರ್ಥಿಗಳು ನೈಜ ಜಗತ್ತಿನ ಸವಾಲುಗಳನ್ನು ಗುರುತಿಸಿ, ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸಲು ಹ್ಯಾಕಥಾನ್‌ಗಳು ಉತ್ತಮ ವೇದಿಕೆಯಾಗಿವೆ ಎಂದು ಹೇಳಿದರು. ಪ್ರಾಯೋಗಿಕ ಜ್ಞಾನ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಹಾಗೂ ತಾಂತ್ರಿಕ ಕೌಶಲ್ಯಗಳು ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಮುಖವಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದರಾಮ ಆರ್. ಪಾಟೀಲ್, ವಿದ್ಯಾರ್ಥಿಗಳು ಇಂತಹ ತಾಂತ್ರಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತರಗತಿ ಕೊಠಡಿಯ ಕಲಿಕೆಯ ಜತೆಗೆ ಪ್ರಾಯೋಗಿಕ ಅನುಭವ ಪಡೆಯುವುದು ವೃತ್ತಿಪರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಉಪಪ್ರಾಂಶುಪಾಲರಾದ (ಶೈಕ್ಷಣಿಕ) ಡಾ. ಎಸ್.ಆರ್. ಹೊಟ್ಟಿ ಹಾಗೂ (ಆಡಳಿತ) ಡಾ. ಭಾರತಿ ಹರಸೂರ ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥ ಡಾ. ನಾಗೇಂದ್ರ ಎಚ್. ಮಾತನಾಡಿ, ಇಸಿಇ ವಿಭಾಗವು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ತಾಂತ್ರಿಕ ಸಾಮರ್ಥ್ಯ ವೃದ್ಧಿಗೆ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಹಳೆಯ ವಿದ್ಯಾರ್ಥಿಗಳು ಇಂತಹ ಶೈಕ್ಷಣಿಕ ಹಾಗೂ ತಾಂತ್ರಿಕ ಉಪಕ್ರಮಗಳಿಗೆ ಬೆಂಬಲ ನೀಡಲು ಆಸಕ್ತಿ ತೋರುತ್ತಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದ ಸಂಯೋಜಕರಾದ ಡಾ. ಶ್ರೀಧರ ಕೆ., ಡಾ. ಜೂಹಿ ನಿಷಾತ್ ಅನ್ಸಾರಿ, ಪ್ರೊ. ಪಂಕಜ್ ಮಾಹೂರ್ಕರ್, ಪ್ರೊ. ಪ್ರತೀಕ್ ಶಂಕರ್ ಹಾಗೂ ಪ್ರೊ. ಜ್ಯೋತಿ ಪಾಟೀಲ್ ಅವರು ಬೆಂಗಳೂರಿನ ಇನ್ಸಿನಿಯನ್ ಟೆಕ್ನಾಲಜೀಸ್‌ನಲ್ಲಿ ಎಂಬೆಡೆಡ್ ಸಿಸ್ಟಮ್ಸ್ ಕುರಿತು ಒಂದು ವಾರದ ತರಬೇತಿ ಪೂರ್ಣಗೊಳಿಸಿದ್ದು, ಇದೀಗ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಉಪ ತರಬೇತಿ ಮತ್ತು ಉದ್ಯೋಗಾಧಿಕಾರಿ ಡಾ. ನಾಗೇಶ್ ಸಾಲಿಮಠ ಉಪಸ್ಥಿತರಿದ್ದರು. ಪ್ರೊ. ಮೀನಾಕ್ಷಿ ಪಾಟೀಲ್, ಪ್ರೊ. ವೀರಣ್ಣ ಗುಗ್ವಾಡ್, ಪ್ರೊ. ರಾಜಕುಮಾರ್ ಬೈನೂರ್, ಪ್ರೊ. ಸಿ.ಡಿ. ಬೋಗಲೆ, ಪ್ರೊ. ವೀಣಾ ಸರಾಥ್, ಡಾ. ರಾಕೇಶ್ ಹುಡೇದ್, ಪ್ರೊ. ಓಂಕಾರ್ ಯಕ್ಲಲ್, ಪ್ರೊ. ಗಾಯತ್ರಿ ಮಠ ಹಾಗೂ ಪ್ರೊ. ರೇಣುಕಾ ಹಟ್ಟಿ ಸೇರಿದಂತೆ ಹಲವು ಅಧ್ಯಾಪಕರು ಭಾಗವಹಿಸಿದ್ದರು.






