ಕಲಬುರಗಿ| ಸಿಎಂ ಸಿದ್ದರಾಮಯ್ಯ ಕುರಿತು ಅವಹೇಳನಕಾರಿ ಪೋಸ್ಟ್: ಪಿಡಿಒ ಪ್ರವೀಣಕುಮಾರ್ ಬಂಧನ

ಕಲಬುರಗಿ: ಸಿಎಂ ಸಿದ್ದರಾಮಯ್ಯ ಅವರಿಗೆ 'ಸಿದ್ರಾಮುಲ್ಲಾ' ಎಂದು ಅವಹೇಳನಕಾರಿಯಾಗಿ ವಾಟ್ಸ್‌ಆ್ಯಪ್ ನಲ್ಲಿ ಸ್ಟೇಟಸ್ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಬರ್ಗಾ ಠಾಣೆಯ ಪೊಲೀಸರು ಪಿಡಿಒ ಪ್ರವೀಣಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಆಳಂದ ತಾಲ್ಲೂಕಿನ ಸುಂಟನೂರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿದ್ದ ಪ್ರವೀಣಕುಮಾರ್ ಉಡಗಿ, ತಮ್ಮ ಮೊಬೈಲ್ ನಲ್ಲಿ 'ಸಿದ್ರಾಮುಲ್ಲಾ' ಎಂದು ಬರೆಯುವುದರ ಜೊತೆಗೆ ಸಿದ್ದರಾಮಯ್ಯ ಅವರ ತಲೆಗೆ ಮುಸ್ಲಿಮರು ಧರಿಸುವ ಟೋಪಿ ಹಾಕಿರುವಂತೆ ಎಡಿಟ್ ಮಾಡಲಾದ ಚಿತ್ರವನ್ನು ಸ್ಟೇಟಸ್ ಇಟ್ಟುಕೊಂಡಿದ್ದರು. ಚಿತ್ರದಲ್ಲಿ 'ಸಿದ್ರಾಮುಲ್ಲಾನ ಬಜೆಟ್ ನಲ್ಲಿ ಕೃಷಿಕರಿಗೆ ಬೆಲೆನೇ ಇಲ್ವಾ? ರೈತರ ಕಷ್ಟ ಹಾಗೂ ನಷ್ಟಗಳಿಗಿಂತ ಮುಸ್ಲಿಂ ಕಾಂಟ್ರಾಕ್ಟರ್ ಮಹತ್ವದ್ದಾಗಿದೆ' ಎಂದು ಬರೆಯಲಾಗಿತ್ತು.
ಇದರ ಬೆನ್ನಲ್ಲೇ ಸುಂಟನೂರ ಗ್ರಾಮದ ಮುಖಂಡ ಮಲ್ಲಿಕಾರ್ಜುನ ದಣ್ಣೂರ ಎಂಬವರು ನೀಡಿದ ದೂರಿನ ಮೇರೆಗೆ ಶುಕ್ರವಾರ ಪ್ರಕರಣ ದಾಖಲಿಸಿಕೊಂಡ ನಿಂಬರ್ಗಾ ಠಾಣೆಯ ಪೊಲೀಸರು ಆರೋಪಿ ಪ್ರವೀಣಕುಮಾರ್ ನನ್ನು ರವಿವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





