ಕಲಬುರಗಿ ಪ್ರವಾಹ ಪೀಡಿತರಿಗೆ ಶಾಶ್ವತ ಪರಿಹಾರ ಒದಗಿಸಲಾಗುವುದು : ಬಿ.ವೈ.ವಿಜಯೇಂದ್ರ ಭರವಸೆ

ಕಲಬುರಗಿ: ಅತಿಯಾದ ಮಳೆಯಿಂದ ನದಿ ತೀರದ ಹಲವು ಗ್ರಾಮಗಳ ಜನರು ಕಾಳಜಿ ಕೇಂದ್ರದಲ್ಲಿ ವಾಸಿಸುತ್ತಿರುವವ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುವುದರ ಜೊತೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಎಲ್ಲರಿಗೂ ಮನೆ ನಿರ್ಮಿಸಿ ಕೊಡುವಂತೆ ಸಿಎಂ ಅವರೊಂದಿಗೆ ಮಾತನಾಡಿ, ನಿರಾಶ್ರಿತರಿಗೆ ಪರಿಹಾರ ಒದಗಿಸಲಾಗುತ್ತದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಭರವಸೆ ನೀಡಿದರು.
ಮಂಗಳವಾರ ಜೇವರ್ಗಿ ತಾಲ್ಲೂಕಿನ ಮಂದರವಾಡ, ಕೋನಹಿಪ್ಪರಗಾ, ಕೋಬಾಳ ಮತ್ತು ಕೂಡಿ ದರ್ಗಾದ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, “ಈ ಹಿಂದೆ ಪ್ರವಾಹದಿಂದ ಹಾನಿಗೊಳಗಾದಾಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮನೆಗಳನ್ನು ನಿರ್ಮಿಸಿ ನೀಡಿತ್ತು. ಆದರೆ ಇಂದಿನ ಸರಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲವಾಗಿದೆ. ನಾವು ಜನರ ಪರವಾಗಿ ಒತ್ತಡ ಹೇರಿಸಿ ಶಾಶ್ವತ ಪರಿಹಾರ ಒದಗಿಸುವುದಕ್ಕೆ ಬದ್ಧರಾಗಿದ್ದೇವೆ ಎಂದರು.
ಕಾಳಜಿ ಕೇಂದ್ರಗಳಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಗುಣಮಟ್ಟದ ಊಟ, ಚಿಕ್ಕ ಮಕ್ಕಳಿಗೆ ಹಾಲು, ಬ್ರೆಡ್, ಹಣ್ಣು, ಬಟ್ಟೆ ಒದಗಿಸಬೇಕು ಎಂದು ಸೂಚಿಸಿದ ಅವರು, ತುರ್ತು ನಿಧಿಯಿಂದ ಪ್ರತಿಯೊಬ್ಬ ನಿರಾಶ್ರಿತನಿಗೂ ತಕ್ಷಣ 10 ಸಾವಿರ ರೂ. ಪರಿಹಾರ ನೀಡಲು ತಹಶೀಲ್ದಾರರಿಗೆ ಆದೇಶ ನೀಡಿದರು.
ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್ ಪಾಟೀಲ ನಡಹಳ್ಳಿ, ಶಾಸಕ ಬಸವರಾಜ ಮತ್ತಿಮಡು, ಬಿ.ಜಿ ಪಾಟೀಲ, ಅಮರನಾಥ ಪಾಟೀಲ, ಶಿವರಾಜ ಪಾಟೀಲ ರದ್ದೇವಾಡಗಿ, ಮಲ್ಲಿನಾಥಗೌಡ ಪಾಟೀಲ ಯಲಗೋಡ, ನಿತಿನ್ ಗುತ್ತೇದಾರ, ಅಶೋಕ ಬಗಲಿ, ಶೋಭಾ ಬಾಣಿ, ರೇವಣಸಿದ್ದಪ್ಪ ಸಂಕಾಲಿ, ದೇವಿಂದ್ರ ಮುತ್ತಕೋಡ, ಬಾಬು ಪಾಟೀಲ, ಗುರುರಾಜ ಸುಲಹಳ್ಳಿ, ಭಾಗೇಶ ಹೊತ್ತಿನಮಡು, ನಿಂಗಣ್ಣ ರದ್ದೇವಾಡಗಿ, ಅನಿಲಕುಮಾರ ದೊಡ್ಡಮನಿ, ವಿಶ್ವ ಜೆಡ್‍ಪಿ, ಸಮೀರ ಪಟೇಲ, ಬಸವರಾಜ ಮದ್ರಿಕಿ ಸೇರಿದಂತೆ ಇತರರು ಇದ್ದರು.







