ಸೇಡಂ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಕಲಬುರಗಿ, ನ.11: ಸೇಡಂ ಪಟ್ಟಣಕ್ಕೆ ಖಾಚೂರು ಬಾಂದಾರು ನೀರನ್ನು ಪೂರೈಸುವ ಯೋಜನೆಗೆ ಅಡಿಗಲ್ಲಿಡಲಾಗಿದೆ. ಇದರಿಂದ ಬರುವ ದಿನಗಳಲ್ಲಿ ಪಟ್ಟಣದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಸೇಡಂ ಪಟ್ಟಣದ ಸರ್ವೇ ನಂ. 705ರ ಆಶ್ರಯ ಕಾಲನಿಯಲ್ಲಿ ಕಲಬುರಗಿ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಸೇಡಂ ಪುರಸಭೆ ವತಿಯಿಂದ ಕೇಂದ್ರ ಅಮೃತ್ 2.0 ಯೋಜನೆಯಡಿ ಸೇಡಂ ಪಟ್ಟಣಕ್ಕೆ ಖಾಚೂರ ಬ್ಯಾರೇಜ್ ಮೂಲದಿಂದ ನೀರು ಸರಬರಾಜು ಯೋಜನೆಯ (ಅಂದಾಜು ಮೊತ್ತ ರೂ. 47.85 ಕೋಟಿ ರೂ.) ಶಂಕುಸ್ಥಾಪನೆ ನೆರವೇಸಿಸಿ ಮಾತನಾಡಿದರು.
ಸೇಡಂ ಪಟ್ಟಣಕ್ಕೆ ಈಗ ಸಟಪಟನಹಳ್ಳಿ ಬಾಂದಾರಿನ ನೀರು ಪೂರೈಕೆ ಇದ್ದರೂ ಅಲ್ಲಲ್ಲಿ ಸಮಸ್ಯೆಯಾಗುತ್ತಿರೋದು 2004 ರಲ್ಲೇ ಮೊದಲಿಗೆ ಶಾಸಕನಾದಾಗ ಗಮನಕ್ಕೆ ಬಂತು. ಇದೀಗ ಅವೆಲ್ಲಾ ಸಮಸ್ಯೆಗೆ ಕಾಯಂ ಪರಿಹಾರವಾಗಿ ಈ ಯೋಜನೆ ರೂಪಿಸಲಾಗಿದೆ. ಇದರಿಂದ ಸೇಡಂನಲ್ಲಿ ಇನ್ನು ಒಂದೂವರೆ ವರ್ಷದ ನಂತರ ಪ್ರತಿಯೊಬ್ಬರಿಗೂ 135 ಲೀಟರ್ ಶುದ್ಧ ನೀರು ಲಭ್ಯವಾಗಲಿದೆ ಎಂದರು.
ಆಶ್ರಯ ಕಾಲನಿ, ಚಿಂಚೋಳಿ ರಸ್ತೆ, ಕಲಬುರಗಿ ರಸ್ತೆ ಸೇರಿದಂತೆ ಸೇಡಂನಲ್ಲಿ 5 ಕಡೆ ಹೊಸ ಮೇಲ್‌ಸ್ತರದ ಟ್ಯಾಂಕ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ನೀರು ಸಂಗ್ರಹಿಸಿ ಜನರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಸದರಿ ಕಾಮಗಾರಿ ಗುಣಮಟ್ಟದಿಂದ ಮಾಡುವಂತೆ ಸ್ಥಳದಲ್ಲಿದ್ದ ಗುತ್ತಿಗೆದಾರರು, ಅಧಿಕಾರಿಗಳಿಗೆ ಅವರು ಖಡಕ್ ಸೂಚನೆ ನೀಡಿದರು.
ಜಯದೇವ, ಕಿದ್ವಾಯಿ, ಸೂಪರ್ ಸ್ಪೆಷಾಲಿಟಿ, ಟ್ರಾಮಾ ಕೇರ್ ಆಸ್ಪತ್ರೆಗಳು ಚೆನ್ನಾಗಿ ಕೆಲಸ ಮಾಡುತ್ತಿವೆ. ಬಡವರು ಖಾಸಗಿ ಸಂಸ್ಥೆಗಳತ್ತ ಮುಖ ಮಾಡದೆ ಸರಕಾರಿ ಸಂಸ್ಥೆಗಳಿಗೆ ಬಂದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ಸೇಡಂ ಪಟ್ಟಣದಲ್ಲಿ ಒಳ ಚರಂಡಿ ಜಾಲ ಬಲವರ್ಧನೆಗೂ ಕ್ರಮಕೈಗೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ಇನ್ನು 800 ಮೀಟರ್ ಕಾಮಗಾರಿ ಬಾಕಿ ಇದೆ. ಇದು ಜೋಡಣೆಯಾದಲ್ಲಿ ಒಳ ಚರಂಡಿ ಸಮಸ್ಯೆಯೂ ಬಗೆಹರಿಯಲಿದೆ. 56 ಕೋಟಿ ರೂ. ಯೋಜನೆ ಇದಾಗಿದ್ದು, ಈಗಾಗಲೇ ಎಸ್‌ಟಿಪಿ ಕೂಡ ಆಗಿದೆ ಎಂದು ಸಚಿವ ಡಾ. ಶರಣಪ್ರಕಾಶ ಹೇಳಿದರು.
ಇಇ ನರಸಿಂಹ ರೆಡ್ಡಿ, ಸಂಜೀವ ಕುಮಾರ್ , ಎಸಿ ಪ್ರಭು ರೆಡ್ಡಿ, ತಹಶೀಲ್ದಾರ್ ಶ್ರೇಯಾಂಕ್ ಧನಶ್ರಿ, ಪುರಸಭೆ ಅಧ್ಯಕ್ಷ ವೀರೇಂದ್ರ ರುದನೂರ್, ಉಪಾಧ್ಯಕ್ಷೆ ಸೈಜಾದಬಿ ಸೇರಿದಂತೆ ಅನೇಕರಿದ್ದರು.







