ಕರ್ನಾಟಕ ಕೇಂದ್ರೀಯ ವಿವಿಯ ನಾಲ್ವರು ಸಂಶೋಧಕರಿಗೆ ಪಿಎಚ್.ಡಿ. ಪದವಿ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ನಾಲ್ವರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಮಹಾಪ್ರಬಂಧಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಅವರಿಗೆ ಪಿಎಚ್.ಡಿ. ಪದವಿ ನೀಡಿದೆ.
ಅರ್ಥಶಾಸ್ತ್ರ ಅಧ್ಯಯನ ಮತ್ತು ಯೋಜನೆ ವಿಭಾಗದ ರವಿ ಕುಮಾರ್ ಅವರು ಬಿಹಾರ ರಾಜ್ಯದ ಕತಿಹಾರ್ ಮತ್ತು ಖಗಾರಿಯಾ ಜಿಲ್ಲೆಗಳಲ್ಲಿ ರಬಿ ಮೆಕ್ಕೆಜೋಳದ ಉತ್ಪಾದನೆ ಹಾಗೂ ಮಾರುಕಟ್ಟೆಯ ಆರ್ಥಿಕ ಅಧ್ಯಯನ ವಿಷಯದ ಕುರಿತು ಸಂಶೋಧನೆ ನಡೆಸಿದ್ದಾರೆ. ಪ್ರೊ. ಪುಷ್ಪಾ ಎಂ. ಸವದತ್ತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪೂರ್ಣಗೊಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಅಶ್ವಿನಿ ಕುಮಾರ ಗಾದಿಗೆ ಅವರು 5ಜಿ ಸಬ್-6 ಗಿಗಾಹರ್ಟ್ಜ್ ಅನ್ವಯಿಕೆಗಳಿಗಾಗಿ ಮಲ್ಟಿ-ಟೆಕ್ನಾಲಜಿ ರೇಡಿಯೊ ಫ್ರೀಕ್ವೆನ್ಸಿ ಪವರ್ ಆಂಪ್ಲಿಫೈಯರ್‌ಗಳ ವಿನ್ಯಾಸ ಕುರಿತು ಸಂಶೋಧನೆ ಕೈಗೊಂಡಿದ್ದು, ಪ್ರೊ. ಪರಮೇಶ ಅವರ ಮಾರ್ಗದರ್ಶನ ಪಡೆದಿದ್ದಾರೆ.
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಚಂಡಿವಾಲಾ ಆಯುಷ್ ಪವನ್ ಅವರು ಹಿಂದಿ ವೆಬ್ ಸರಣಿಗಳಲ್ಲಿ ಯುವಜನರ ಗುರುತಿನ ಅಭಿವ್ಯಕ್ತಿ, ವೈಯಕ್ತಿಕತೆ ಮತ್ತು ಸಾಮೂಹಿಕ ಸಾಮಾಜಿಕ ರಚನೆಗಳ ನಡುವಿನ ಸಂಬಂಧ ಕುರಿತು ಸಂಶೋಧನೆ ನಡೆಸಿದ್ದಾರೆ. ವಿಭಾಗದ ಸಹ ಪ್ರಾಧ್ಯಾಪಕ ಡಾ.ಓಯನಮ್ ಬೆಡಜಿತ್ ಮೈತೈ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಪೂರ್ಣಗೊಳಿಸಿದ್ದಾರೆ.
ರಸಾಯನಶಾಸ್ತ್ರ ವಿಭಾಗದ ಮಧುಸ್ಮಿತಾ ಹಾತಿಮುರೈ ಅವರು ಡೀಪ್ ಯುಟೆಕ್ಟಿಕ್ ದ್ರಾವಕಗಳು (ಡಿಇಎಸ್) ಲಿಗ್ನೋಸೆಲ್ಯುಲೋಸಿಕ್ ಎಂಜೈಮ್‌ಗಳ ಚಟುವಟಿಕೆಯ ಮೇಲೆ ಬೀರುವ ಪ್ರಭಾವ ಹಾಗೂ ಅವುಗಳ ವಿಷಕಾರಿತ್ವದ ಮೌಲ್ಯಮಾಪನ ಕುರಿತು ಸಂಶೋಧನೆ ನಡೆಸಿದ್ದಾರೆ. ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಶೋಕ್ ಪಬ್ಬತ್ತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪೂರ್ಣಗೊಳಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿಗಳ ಸಾಧನೆಗೆ ವಿವಿಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಅಭಿನಂದನೆ ಸಲ್ಲಿಸಿದ್ದಾರೆ.






