ಆರೆಸ್ಸೆಸ್ ಗೆ ಬರೆದ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ, 'ಪಿಕ್ಚರ್ ಅಭಿ ಬಾಕಿ ಹೈ': ಪ್ರಿಯಾಂಕ್ ಖರ್ಗೆ

ಕಲಬುರಗಿ: ಆರೆಸ್ಸೆಸ್ ಗೆ ಬರೆದ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ. ಬರಲಿ ಬಿಡಿ ಅವಸರ ಯಾಕೆ? 'ಪಿಚ್ಚರ್ ಅಭಿ ಬಾಕಿ ಹೈ' ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಹಲವಾರು ಪ್ರಶ್ನೆಗಳನ್ನು ಹಾಕಿ ಆರೆಸ್ಸೆಸ್ ಗೆ ಪತ್ರ ಬರೆದಿದ್ದೇನೆ. ಇನ್ನೂ ಉತ್ತರ ನೀಡಿಲ್ಲ. ನೀಡಲಿ ಬಿಡಿ ಯಾಕೆ ಅವಸರ 'ಪಿಕ್ಚರ್ ಅಭಿ ಬಾಕಿ ಹೈ'. ಅವರೂ ಕೂಡಾ ನನ್ನ ಹಾಗೂ ಕುಟುಂಬದ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ, ಹಾಕಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಮುಂದಿನ ದಿನಗಳಲ್ಲಿ ಆರೆಸ್ಸೆಸ್ ಪಥ ಸಂಚಲನ ನಡೆಸಬೇಕಿದ್ದರೆ ಕಡ್ಡಾಯಾಗಿ ಅನುಮತಿ ಪಡೆದುಕೊಳ್ಳಲೇಬೇಕೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ನಾನು ಗೃಹ ಸಚಿವನಾಗಿರುವವರಗೆ ಕಡ್ಡಾಯ. ಆರೆಸ್ಸೆಸ್ ನವರು ಇದುವರೆಗೆ ಮಾಹಿತಿ ಮಾತ್ರ ನೀಡುತ್ತಿದ್ದರು. ಚಿತ್ತಾಪುರದಲ್ಲೂ ಹಾಗೆಯೇ ಮಾಡಿದರು. ಅನುಮತಿ ಕೊಡಲಿಲ್ಲ ಎಂದು ಕೋರ್ಟ್ ಗೆ ಹೋಗಿದ್ದರು. ಕೋರ್ಟ್ ನಿರ್ದೇಶನದಂತೆ ಅರ್ಜಿ ಸಲ್ಲಿಸಿದರು. ಇನ್ನು ಮುಂದೆಯೂ ಕೂಡಾ ಅವರು ಅರ್ಜಿ ಸಲ್ಲಿಸಿದರೆ, ಕೋರ್ಟ್ ನಿರ್ದೇಶನ ಹಾಗೂ ಸರ್ಕಾರದ ಮಾನದಂಡ, ಸ್ಥಳ, ಸಮಯ ಹಾಗೂ ಸಂದರ್ಭಕ್ಕನುಗುಣವಾಗಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಆರೆಸ್ಸೆಸ್ ಗುರುದಕ್ಷಿಣೆ ತೆಗೆದುಕೊಳ್ಳುತ್ತಾರಂತೆ. ಗುರು ಎಂದರೆ ಯಾರು? ಧ್ವಜ ತಾನೆ? ಧ್ವಜದ ಮೇಲೆ ಗುರುದಕ್ಷಿಣೆ ತೆಗೆದುಕೊಂಡರೆ, ಅದಕ್ಕೆ ಲೆಕ್ಕ ತೋರಿಸಲಿ ಎಂದು ಪ್ರಿಯಾಂಕ್ ಸವಾಲು ಹಾಕಿದರು.
ಶ್ರೀರಾಮನ ಹುಂಡಿ ಕಳ್ಳತನ ವಿಚಾರ ಪ್ರಸ್ತಾಪಿಸಿದ ಗೃಹ ಸಚಿವರು, ಬೆಳ್ಳಿ, ಚಿನ್ನ, ಆಭರಣ, ಹಣ ಸೇರಿದಂತೆ ಇಟ್ಟಿಗೆಗಳನ್ನು ಕೂಡಾ ಕಳವು ಮಾಡಿದ್ದಾರೆ. ಕರ್ನಾಟಕದ ಗಣೇಶ್ ಎನ್ನುವವರು ಕಟ್ಟಡ ನಿರ್ಮಾಣ ಗುತ್ತಿಗೆ ಪಡೆದುಕೊಂಡಿದ್ದಾರಂತೆ, ಇಲ್ಲಿಂದ ಹೋಗಿ ಅಲ್ಲಿ ಕಮಿಷನ್ ಹೊಡೆದಿದ್ದಾರಂತೆ. ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾನದ ವಿಚಾರದಲ್ಲಿ ಕೆಲವರು ವಿರೋಧ ಮಾಡಿದ್ದರು. ಆದರೂ ಮೋದಿ ತರಾತುರಿಯಲ್ಲಿ ಮಾಡಿದ್ದರು. ಚಂದ ಚೋರಿಯಲ್ಲಿ ಆರೆಸ್ಸೆಸ್ ಗೂ ಪಾಲು ಹೋಗಿದ್ದರೆ ನನಗೆ ಅನುಮಾನವಿಲ್ಲ ಎಂದು ಹೇಳಿದರು.
ಕೇಂದ್ರ ಸರಕಾರದ ವಿದೇಶಾಂಗ ನೀತಿ ವಿಫಲವಾಗಿದೆ ಎಂದು ಟೀಕಿಸಿದ ಸಚಿವರು, ಮೋದಿ ವಿದೇಶಾಂಗ ನೀತಿ ಇನ್ ಸ್ಟಾದಲ್ಲಿ ರೀಲ್ ಮಾಡಲು ಹಾಗೂ ಚಾಕೋಲೇಟ್ ವಿತರಣೆ ಮಾಡಲು ಮಾತ್ರ ಸೀಮಿತವಾಗಿದೆ. ಕಚ್ಚಾ ತೈಲ ಬೆಲೆ ಕಡಿಮೆಯಾಗಿದೆಯಲ್ಲ ಈಗೇಕೆ ಪೆಟ್ರೋಲಿಯಂ ಬೆಲೆ ಕಡಿಮೆ ಮಾಡುತ್ತಿಲ್ಲ ? ಎಂದು ಪ್ರಶ್ನಿಸಿದರು.
ರಾಜ್ಯ ಮಂತ್ರಿಮಂಡಲದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇದ್ದೇ ಇರುತ್ತದೆ. ನಮ್ಮ ಭಾಗದಿಂದ ಯಾರೇ ಸಚಿವರಾದರೂ ಕೂಡಾ ಹೆಚ್ಚಿನ ಅಭಿವೃದ್ದಿಗೆ ಸಹಕಾರಿಯಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಆರ್ಟಿಕಲ್ 371 ಜೆ ಅಡಿಯಲ್ಲಿ ಗ್ರೇಡ್ 2 ತಹಶೀಲ್ದಾರಗಳ ಪದೋನ್ನತಿ ವಿಚಾರ, ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು. ಕಲಬುರಗಿ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವಾಟರ್ ಮೆನ್, ಬಿಲ್ ಕಲೆಕ್ಟರ್ ಗಳ ಖಾಯಮಾತಿ ವಿಚಾರದಲ್ಲಿಯೂ ಕೂಡಾ ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಡಬರಾಬಾದ್ ಬಳಿಯ ರೇಷ್ಮೆ ಇಲಾಖೆಯಕಟ್ಟಡದ ಕಳಪೆ ಕಾಮಗಾರಿ ವಿಚಾರ ಪ್ರಸ್ತಾಪಿಸದ್ದಕ್ಕೆ ಉತ್ತರಿಸಿದ ಸಚಿವರು ಮುಂದಿನ ವಾರ ಭೇಟಿ ನೀಡುತ್ತೇನೆ, ಕಳಪೆ ಆಗಿದ್ದರೆ ಕ್ರಮ ವಹಿಸಲಾಗುವುದು ಎಂದರು.
ದೀರ್ಘಾವಧಿ ಕಾಲ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಂಧಿಖಾನೆ ಇಲಾಖೆ ಹಾಗೂ ಗೃಹ ಇಲಾಖೆಯ ಸಿಬ್ಬಂದಿಯ ವರ್ಗಾವಣೆಗೆ ಸಂಬಂಧಿಸಿದಂತೆ ತರ್ಕಬದ್ದ ನಿಯಮಾವಳಿ ಮೂಲಕ ಕ್ರಮ ವಹಿಸಲಾಗುವುದು. ಒಂದು ವೇಳೆ, ವರ್ಗಾವಣೆ ಮಾಡಿದರೆ, ಸಿಬ್ಬಂದಿ ಕೋರ್ಟ್ ಗೆ ಹೋಗುವ ಸಾಧ್ಯತೆ ಇರುವುದರಿಂದ ಕಾನೂನಿನ ಪ್ರಕಾರವೇ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಲೋಕಾಯುಕ್ತ ಸಂಸ್ಥೆ ಸೇರಿದಂತೆ ಯಾವುದೇ ಸಂಸ್ಥೆಗಳು ಒಳ್ಳೆಯ ಸಲಹೆ ನೀಡಿದರೆ ಸ್ವೀಕರಿಸಲಾಗುವುದು ಎಂದ ಗೃಹ ಸಚಿವರು, ನೂತನ ಪೊಲೀಸ್ ಠಾಣೆಗಳ ಸ್ಥಾಪನೆಗೆ ಕೇಂದ್ರದ ನಿಮಯಮಾವಳಿ ಪಾಲನೆ ಮಾಡಬೇಕಿರುತ್ತದೆ. ಯಾವುದೇ ಹೊಸ ಠಾಣೆ ಸ್ಥಾಪನೆಗೆ ಆಯಾ ಪ್ರದೇಶದ ಕ್ರೈಮ್ ಪರಿಗಣನೆಗೆ ಬರುತ್ತದೆ ಹೊರತು ವ್ಯಾಪ್ತಿ ಪ್ರದೇಶವಲ್ಲ. ಇದೇ ನಿಯಮಾವಳಿ ಪ್ರಕಾರ ಕಲಬುರಗಿ ಕಮಿಷನರೇಟ್ ಅಡಿಯಲ್ಲೂ ನೂತನ ಠಾಣೆಗಳ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಜಗದೇವ ಗುತ್ತೇದಾರ, ಕನೀಝ್ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರು, ಪ್ರವೀಣ್ ಹರವಾಳ, ಸುಭಾಷ್ ರಾಠೋಡ, ರಾಜಗೋಪಾಲ ಮುದಿರೆಡ್ಡಿ ಸೇರಿದಂತೆ ಹಲವರಿದ್ದರು.






