ಪ್ಲಾಸ್ಟಿಕ್ ಮುಕ್ತ ಸುರಪುರ ಅಭಿಯಾನ | ಎಚ್ಚರಿಕೆ ಉಲ್ಲಂಘಿಸಿದರೆ ಅಂಗಡಿ ಲೈಸೆನ್ಸ್ ರದ್ದು: ನ್ಯಾ.ಯಮನಪ್ಪ ಬಮ್ಮಣಗಿ

ಸುರಪುರ: ಪ್ಲಾಸ್ಟಿಕ್ ಎನ್ನುವುದು ಸಮಾಜಕ್ಕೆ ಮಾರಕ ಹಾಗೂ ರೋಗಕಾರಕವಾಗಿದ್ದು ಯಾರು ಅದನ್ನು ಬಳಕೆ ಮಾಡಬಾರದು. ವ್ಯಾಪಾರಸ್ಥರು ಈ ಎಚ್ಚರಿಕೆಯನ್ನು ಉಲ್ಲಂಘಿಸಿದರೆ ಅಂತಹ ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಸುರಪುರ ಪೀಠದ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಯಮನಪ್ಪ ಬಮ್ಮಣಗಿ ಎಚ್ಚರಿಸಿದರು.
ತಾಲೂಕು ಕಾನು ಸೇವಾ ಸಮಿತಿಯ ನೇತೃತ್ವದಲ್ಲಿ ತಾಲೂಕ ನ್ಯಾಯವಾದಿಗಳ ಸಂಘ, ತಾಲೂಕ ಆಡಳಿತ, ತಾಲೂಕ ಪಂಚಾಯತ್, ಪೊಲೀಸ್ ಇಲಾಖೆ, ನಗರ ಸಭೆ, ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಸುರಪುರ ಅಭಿಯಾನದ ಅಂಗವಾಗಿ ನಡೆದ ಜಾಥಾಕ್ಕೆ ಚಾಲನೆ ನೀಡಿ ನಂತರ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾತನಾಡಿ, ಇಂದು ನಾವು ಮಾಡುತ್ತಿರುವ ಈ ಜಾಥಾವಾಗಲಿ ಅಥವಾ ನೀಡುತ್ತಿರುವ ಸೂಚನೆಯಾಗಲಿ ಕೇವಲ ಅನೌಪಚಾರಿಕವಾದುದಲ್ಲ ಎಲ್ಲಾ ಅಂಗಡಿಗಳ ವ್ಯಾಪಾರಸ್ಥರಿಗೆ ಒಂದು ವಾರಗಳ ಕಾಲಾವಕಾಶ ನೀಡುತ್ತೇವೆ ಅಷ್ಟರಲ್ಲಿ ತಾವು ಯಾವುದೇ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣ ನಿಲ್ಲಿಸಬೇಕು. ಇದನ್ನು ಉಲ್ಲಂಘಿಸಿದಲ್ಲಿ ಮೊದಲಿಗೆ 10 ಸಾವಿರ ರೂಪಾಯಿಗಳ ದಂಡ ವಿಧಿಸಲಾಗುತ್ತದೆ. ಅಲ್ಲದೆ ಪೋಲಿಸ್ ಇಲಾಖೆ ನಗರಸಭೆ ಸೇರಿದಂತೆ ಎಲ್ಲ ಸಾರ್ವಜನಿಕ ಸೇವಾ ಇಲಾಖೆಗಳು ಇದರ ಕುರಿತು ನಿಗಾ ವಹಿಸಲಿವೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಅಂತಹ ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಅವರು ಹೇಳಿದರು.
ನಾವೆಲ್ಲರೂ ಕೇವಲ ಒಂದು ದಿನದ ಈ ಜಾಥಾವನ್ನು ಮಾಡಿ ಹೋಗಲು ಬಂದಿಲ್ಲ, ಆದ್ದರಿಂದ ಎಲ್ಲರೂ ಅರ್ಥೈಸಿಕೊಂಡು ಪ್ಲಾಸ್ಟಿಕ್ ಬಳಕೆ ಮಾಡುವುದು ಸಂಪೂರ್ಣ ನಿಲ್ಲಿಸಬೇಕು. ಮೊದಲಿಗೆ ಒಂದು ಬಾರಿ ಬಳಕೆ ಮಾಡುವಂತ ಪ್ಲಾಸ್ಟಿಕ್ ನಿಷೇಧ ನಂತರ ಎಲ್ಲಾ ರೀತಿಯ ಪ್ಲಾಸ್ಟಿಕ್ ಗಳ ನಿಷೇಧ. ಪ್ಲಾಸ್ಟಿಕ್ ಉತ್ಪಾದಿಸುವ ಕಂಪನಿಗಳಿಗೂ ಕೂಡ ಈಗಾಗಲೇ ಎಚ್ಚರಿಕೆಯನ್ನು ನೀಡಲಾಗಿದೆ. ತಮಗೆ ತಿಳಿಸಿದ ಮೇಲು ಪ್ಲಾಸ್ಟಿಕ್ ಬಳಕೆ ಮುಂದುವರಿಸುವುದು ಸರಿಯಲ್ಲ. ಪ್ಲಾಸ್ಟಿಕ್ ಬದಲಾಗಿ ಬಟ್ಟೆಯ ಚೀಲಗಳನ್ನು ಪರ್ಯಾಯವಾಗಿ ಬಳಸುವುದು ಅಗತ್ಯವಾಗಿದೆ. ಆದ್ದರಿಂದ ಎಲ್ಲರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಿಂದ ಪ್ರಮುಖ ಬೀದಿಗಳ ಮೂಲಕ ಮಹಾತ್ಮ ಗಾಂಧಿ ವೃತದ ವರೆಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ಜಾಥಾ ನಡಸಿ ಎಲ್ಲ ವ್ಯಾಪಾರಸ್ಥರಿಗೂ ಸೂಚನೆಯನ್ನು ನೀಡಲಾಯಿತು.
ಜಾಥಾದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರದ ಫಕೀರವ್ವ ಕೆಳಗೇರಿ, ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಕೆ.ಎಂ ಪಾಟೀಲ, ತಾಲೂಕ ವಕೀಲರ ಸಂಘದ ಅಧ್ಯಕ್ಷರಾದ ಬಸವರಾಜ ಅನಸೂರ, ಗ್ರೇಡ್-2 ತಹಸಿಲ್ದಾರ್ ಮಲ್ಲಯ್ಯ ದಂಡು, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ನಗರ ಸಭೆ ಪೌರಾಯುಕ್ತ ಬಸವರಾಜ ಟಣಕೇದಾರ, ಪಿಎಸ್ಐ ಕೃಷ್ಣ ಸುಬೇದಾರ್, ಬಿಸಿಎಂ ಇಲಾಖೆ ತಾಲೂಕ ವಿಸ್ತೀರ್ಣಾಧಿಕಾರಿ ಯಂಕಣ್ಣ ಟಣಕೆದಾರ,ಗೃಹ ರಕ್ಷಕ ದಳದ ವೆಂಕಟೇಶ ಸುರಪುರ ಸೇರಿದಂತೆ ಅನೇಕ ಜನ ವಕೀಲರು, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






