ಭಾರತ-ಪಾಕ್ ಕದನ ವಿರಾಮ | ಪ್ರಧಾನಿ ಮೋದಿ ಸರ್ವ ಪಕ್ಷ ಸಭೆ ಕರೆಯಲಿ : ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ್ ಖರ್ಗೆ
ಕಲಬುರಗಿ : ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆಯಾಗಲು ಇತರರ ಒತ್ತಡವಿದೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬ ಸ್ಪಷ್ಟನೆ ನೀಡಲು ಪ್ರಧಾನಿ ಮೋದಿಯವರು ಸರ್ವ ಪಕ್ಷ ಸಭೆ ಕರೆಯಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ್ದಾರೆ.
ಮಂಗಳವಾರ ಬೆಳಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಂಪ್ ಅವರು ಕದನ ವಿರಾಮಕ್ಕೆ ಪ್ರಯತ್ನ ಮಾಡಿರುವ ಟೆಲಿಫೋನ್ ಕರೆಗಳ ಮಾಹಿತಿಯೂ ಕೂಡ ನಮ್ಮ ಬಳಿ ಇದೆ. ಈ ನಿಟ್ಟಿನಲ್ಲಿ ಸರ್ವಪಕ್ಷ ಸಭೆ ಕರೆದು ಪ್ರಧಾನಿಯವರು ತಮ್ಮ ಸ್ಪಷ್ಟನೆ ನೀಡಲಿ, ಬಳಿಕ ನಾವು ನಮ್ಮ ಮಾಹಿತಿಯನ್ನು ಆಧರಿಸಿ ಅವರೊಂದಿಗೆ ಚರ್ಚಿಸುತ್ತೇವೆ. ಆಗ ನಿಜವಾದ ಮಾಹಿತಿ ದೇಶದ ಮುಂದೆ ಬರಲಿದೆ ಎಂದರು.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಸಭೆಯು ದೆಹಲಿಯಲ್ಲಿ ನಡೆಯುತ್ತಿದ್ದು, ತಾವು ಅಲ್ಲಿಗೆ ತೆರಳುತ್ತಿರುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷದ ಸಭೆಯಲ್ಲೂ ಕೂಡ ಸರ್ವಪಕ್ಷಗಳ ಸಭೆ ಕರೆಯುವ ಕುರಿತು ಚರ್ಚೆ ನಡೆಯಲಿದೆ ಎಂದರು.
ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಪದೇ ಪದೇ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ತಾನೇ ಮಾಡಿಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಇದು ಕೂಡ ಅವರು ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೋದಿಯವರು ಸರ್ವ ಪಕ್ಷ ಸಭೆ ಕರೆದು ಈ ವಿಚಾರ ಬಗ್ಗೆಯೂ ಕೂಡ ಸ್ಪಷ್ಟನೆ ನೀಡಬೇಕು. ನಿನ್ನೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದಾಗ ಇಂತಹ ವಿಚಾರಗಳ ಕುರಿತು ಜನರಿಗೆ ಸತ್ಯ ಮಾಹಿತಿ ತಿಳಿಸಬೇಕಾಗಿತ್ತು ಎಂದರು.







