ಕಲಬುರಗಿ: ವೀಸಾ ಮುಗಿದರೂ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿದ ಪೊಲೀಸರು

ಕಲಬುರಗಿ: ನಗರದಲ್ಲಿರುವ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿರುವ ಫಾರ್ಮಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಬಂದಿದ್ದ ಸುಡಾನ್ ಮೂಲದ ವಿದ್ಯಾರ್ಥಿಯೊಬ್ಬ ತನ್ನ ವೀಸಾ ಅವಧಿಯನ್ನು ವಿಸ್ತರಣೆ ಮಾಡದೆ ಅಕ್ರಮವಾಗಿ ವಾಸಿಸುತ್ತಿದ್ದನ್ನು ಪತ್ತೆ ಹಚ್ಚಿ, ಆತನನ್ನು ವಿದೇಶಿಯರ ಬಂಧನ ಕೇಂದ್ರಕ್ಕೆ ನಗರ ಪೊಲೀಸರು ಒಪ್ಪಿಸಿದ್ದಾರೆ.
ಸುಡಾನ್ ಮೂಲದ ವಿದ್ಯಾರ್ಥಿ ಅಬುಸಾಫಿಯಾನ್ ಹೈದಿರ್ ಅಹ್ಮದ್ ಅಲಮೀನ್ ಎಂಬಾತನನ್ನು ವಿದೇಶಿಯರ ಬಂಧನ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಯ ಪ್ರಕಟಣೆಯಲ್ಲಿ ತಿಳಿಸಿದೆ.
ಈತ 2013 ನೇ ಸಾಲಿನಲ್ಲಿ 2016ರ ನವೆಂಬರ್ 22ರವರೆಗೆ ವೀಸಾ ಪಡೆದುಕೊಂಡು ಕಲಬುರಗಿ ನಗರದಲ್ಲಿ ವಿದ್ಯಾಭಾಸಕ್ಕಾಗಿ ಬಂದಿದ್ದ. ತನ್ನ ವೀಸಾ ಅವಧಿ ಮುಗಿದರೂ ಅದನ್ನ ವಿಸ್ತರಣೆ ಮಾಡಿಕೊಳ್ಳದೆ ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ರಾಜ್ಯ ಗುಪ್ತ ವಾರ್ತೆಯ ನಿರ್ದೇಶನದಂತೆ ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್.ಡಿ ಅವರ ಮಾರ್ಗದರ್ಶನದಲ್ಲಿ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯ ಪಿಐ ಶಕೀಲ್ ಅಂಗಡಿ, ಪಿಎಸ್ಐ ಇಂದಿರವ್ವ ಸೇರಿದಂತೆ ಸಿಬ್ಬಂದಿ ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು.
ಖಚಿತ ಮಾಹಿತಿ ಕಲೆ ಹಾಕಿದ ಈ ತನಿಖಾ ತಂಡವು, ವಿದೇಶಿ ಪ್ರಜೆ ಅಬುಸಾಫಿಯಾನ್ ಹೈದಿರ್ ಅಹ್ಮದ್ ಅಲಮೀನ್ ಎಂಬಾತನನ್ನು ವಶಕ್ಕೆ ಪಡೆದು, ಬೆಂಗಳೂರಿನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಛೇರಿಯ ಪತ್ರ ವ್ಯವಹಾರದ ಮೂಲಕ ವ್ಯವಹರಿಸಿ ಆತನನ್ನು ವಿದೇಶಿಯರ ಬಂಧನ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







