ಪೊಲೀಸರು ಸೇವಾ ಧರ್ಮ ಪಾಲಿಸಬೇಕು: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕಲಬುರಗಿ : ಪರಿಶಿಷ್ಟ ಜಾತಿಯೊಳಗಿನ ಒಳ ಮೀಸಲಾತಿ ಹಂಚಿಕೆ ಪ್ರಮಾಣಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗಿದ್ದು, ಈ ಕಾರಣದಿಂದ ತಡೆಹಿಡಿಯಲಾಗಿದ್ದ 8,000 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕಾತಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮಂಗಳವಾರ ಕಲಬುರಗಿ ಹೊರವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಮಧುಕರ ಶೆಟ್ಟಿ ಕವಾಯತು ಮೈದಾನದಲ್ಲಿ ನಡೆದ 13ನೇ ತಂಡದ ಪಿ.ಎಸ್.ಐ. (ಸಿವಿಲ್), 12ನೇ ತಂಡದ ಆರ್.ಎಸ್.ಐ./ಸ್ಪೆಷಲ್ ಆರ್.ಎಸ್.ಐ. ಹಾಗೂ 6ನೇ ತಂಡದ ಪಿ.ಎಸ್.ಐ. (ಕೆ.ಎಸ್.ಐ.ಎಸ್.ಎಫ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯೊಳಗಿನ ಒಳ ಮೀಸಲಾತಿಯನ್ನು ನ್ಯಾಯಯುತವಾಗಿ ಹಂಚಿಕೆ ಮಾಡಿರುವುದರಿಂದ, ಇನ್ಮುಂದೆ ಪೊಲೀಸ್ ನೇಮಕಾತಿ ಮಂಡಳಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಲಿದೆ ಎಂದು ತಿಳಿಸಿದರು.
ಖಾಕಿ ಸೇವೆ ಗೌರವದ ಸಂಕೇತ :
“ಪೊಲೀಸ್ ಸೇವೆ ಕೇವಲ ಸಂಬಳಕ್ಕಾಗಿ ಮಾಡುವ ಉದ್ಯೋಗವಲ್ಲ. ಖಾಕಿ ಗೌರವದ ಸಂಕೇತ. ಠಾಣೆಗೆ ಬರುವ ನೊಂದವರ ಕಣ್ಣೀರು ಒರೆಸಿ, ಅವರಿಗೆ ನ್ಯಾಯ ಕೊಡಿಸುವುದು ಪೊಲೀಸರ ಧರ್ಮ,” ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಬಡವರು, ಅಲ್ಪಸಂಖ್ಯಾತರು, ಎಸ್‌ಸಿ-ಎಸ್‌ಟಿ ಸಮುದಾಯದವರನ್ನು ಮುಖ್ಯವಾಹಿನಿಗೆ ತರಲು ಪೊಲೀಸ್ ಇಲಾಖೆ ನೆರವಾಗಬೇಕು ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಸುಧಾರಣೆ :
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೊಲೀಸ್ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದೇವೆ. ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮದಡಿ ಸಾರ್ವಜನಿಕರ ಮನೆಗೆ ತೆರಳಿ ಧೈರ್ಯ ತುಂಬುವ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಹೊರರಾಜ್ಯಗಳಿಂದ ಬಂದು ನಡೆಯುವ ಬ್ಯಾಂಕ್ ದರೋಡೆ, ಚಿನ್ನ ಕಳವು, ಕೊಲೆ ಪ್ರಕರಣಗಳನ್ನು ಪೊಲೀಸರು ಕ್ಷಿಪ್ರವಾಗಿ ಭೇದಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಡ್ರೋನ್, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಆಧುನಿಕ ತಂತ್ರಜ್ಞಾನ ಒದಗಿಸಲಾಗಿದೆ. 52 ವರ್ಷದ ಹಳೆಯ ಸ್ಲೌಚ್ ಹ್ಯಾಟ್ ಬದಲಾಗಿ ಪಿ-ಕ್ಯಾಪ್ ನೀಡಲಾಗಿದೆ ಎಂದರು.
ಸೈಬರ್ ವಂಚನೆ ಇಳಿಕೆ :
2024ರಲ್ಲಿ 24 ಸಾವಿರ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ ಅದು 14 ಸಾವಿರಕ್ಕೆ ಇಳಿಕೆಯಾಗಿದೆ. ಇದು ತಂತ್ರಜ್ಞಾನ ಅಳವಡಿಸಿಕೊಂಡ ಪರಿಣಾಮ ಎಂದು ಹೇಳಿದರು.
ಡ್ರಗ್ಸ್ ವಿರುದ್ಧ ಸಮರ :
ಡ್ರಗ್ಸ್ ಜಾಲ ರಾಜ್ಯಕ್ಕೆ ದೊಡ್ಡ ಸವಾಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕೋಟ್ಯಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ನಾಶಪಡಿಸಿದ್ದೇವೆ. ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ ಎಂದು ಹೇಳಿದರು.
97 ಪ್ರಶಿಕ್ಷಣಾರ್ಥಿಗಳ ನಿರ್ಗಮನ :
ಕಲಬುರಗಿ ಪಿ.ಟಿ.ಸಿ.ಯಿಂದ ಇಂದು 97 ಮಂದಿ ಪ್ರಶಿಕ್ಷಣಾರ್ಥಿಗಳು ತರಬೇತಿ ಪೂರ್ಣಗೊಳಿಸಿ ಕರ್ತವ್ಯಕ್ಕೆ ಸಜ್ಜಾಗಿದ್ದಾರೆ. ಇದುವರೆಗೆ ಸುಮಾರು 8,000 ಮಂದಿಗೆ ಇಲ್ಲಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಪೊಲೀಸ್ ನಂಬರ್-1 :
“ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ನಂಬರ್-1 ಸ್ಥಾನದಲ್ಲಿದೆ ಎಂದು ಇಂಡಿಯಾ ಜಸ್ಟೀಸ್ ವರದಿ ಹೇಳಿದೆ. ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದ 3ನೇ ಮಾದರಿ ಠಾಣೆಯಾಗಿ ಗುರುತಿಸಲಾಗಿದೆ,” ಎಂದು ಸಚಿವರು ಹೇಳಿದರು.
ಟ್ರೋಫಿ ಪ್ರದಾನ :
ತರಬೇತಿ ಅವಧಿಯಲ್ಲಿ ಒಳಾಂಗಣ, ಹೊರಾಂಗಣ ಹಾಗೂ ಶಸ್ತ್ರಾಸ್ತ್ರ ತರಬೇತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಗೃಹ ಸಚಿವರು ಟ್ರೋಫಿ, ಮುಖ್ಯಮಂತ್ರಿಗಳ ಸ್ವೋರ್ಡ್ ಹಾಗೂ ಬ್ಯಾಟನ್ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಮ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ) ದೇವಜ್ಯೋತಿ ರೇ, ಈಶಾನ್ಯ ವಲಯದ ಐ.ಜಿ.ಪಿ ಶಾಂತನು ಸಿನ್ಹಾ, ಕಲಬುರಗಿ ನಗರ ಪೊಲೀಸ್ ಅಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಡಿ.ವೈ.ಎಸ್.ಪಿ ರಾಜಣ್ಣ ಸೇರಿದಂತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು, ಪ್ರಶಿಕ್ಷಾಣಾರ್ಥಿಗಳ ಪೋಷಕರು ಭಾಗವಹಿಸಿದ್ದರು. ಕಲಬುರಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ಸಿ. ಪುಟ್ಟಮಾದಯ್ಯ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದಲ್ಲದೆ ಸಂಸ್ಥೆಯ ವರದಿ ವಾಚನ ಮಾಡಿದರು.






