ರಾಜಕಾರಣ ಮಾಡಬೇಕಾದವರು ಜನರು, ಜನಪ್ರತಿನಿಧಿಗಳಲ್ಲ: ನಟ ಪ್ರಕಾಶ್ ರಾಜ್

ಕಲಬುರಗಿ : ಜನರು ರಾಜಕಾರಣ ಮಾಡಬೇಕಾದವರು. ಗೆದ್ದವರು ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಗೆದ್ದ ಮೇಲೆ ನಮ್ಮ ತೆರಿಗೆ, ನಮ್ಮ ದೇಶ. ಸೇವೆಯಷ್ಟೇ ಜನಪ್ರತಿನಿಗಳ ಕೆಲಸ. ಐದು ವರ್ಷಕ್ಕೊಮ್ಮೆ ಮತ ಕೇಳಲು ಬರುವವರು ಜನಪ್ರತಿನಿಧಿಗಳೇ ಹೊರತು, ಜನರಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.
ʼವಾರ್ತಾಭಾರತಿʼ ಕಲ್ಯಾಣ ಕರ್ನಾಟಕ ಆವೃತ್ತಿಯ ಲೋಕಾರ್ಪಣೆ ಸಮಾರಂಭದಲ್ಲಿ, ಪತ್ರಿಕೆಯ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇದು ನಮ್ಮ ದೇಶ. ಇಲ್ಲಿ ನಿರಂತರ. ಪ್ರಜೆಗಳು ರಾಜಕಾರಣ ಮಾಡಬೇಕು. ರಾಜಕಾರಣಿಗಳು ಕೆಲಸ ಮಾಡಬೇಕು. ಅದನ್ನು ಯಾವತ್ತೂ ಬದಲಾಯಿಸಬೇಡಿ. ರಾಜಕಾರಣ ಜನರೇ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪಿ.ಲಂಕೇಶ್ ಅವರು ಹೇಳುತ್ತಿದ್ದ ಮಾತುಗಳನ್ನು ಉಲ್ಲೇಖಿಸಿದ ಅವರು, ಪತ್ರಿಕೆ - ಮಾಧ್ಯಮ– ಕಲಾವಿದ – ಜನ ನಿರಂತವಾದ ವಿರೋಧ ಪಕ್ಷವಾಗಬೇಕು. ಆಳುವ ಪಕ್ಷದ ಕೃಪಕಟಾಕ್ಷವಿಲ್ಲದೇ ಜನರ ದನಿಯಾಗಿರಬೇಕು. ಆಗ ಮಾತ್ರ ಧೈರ್ಯದಿಂದ ಕೆಲಸ ಮಾಡಲು ಸಾಧ್ಯ. ಇವತ್ತಿನ ಜನರಿಗೆ ರಾಜಕಾರಣ ಮಾಡಬೇಕಾದವರು ಯಾರು ಎಂದು ಹೇಳಬೇಕು. ನಮ್ಮ ರಾಜ್ಯವು ಬೆಂಗಳೂರು ಕೇಂದ್ರಿತ ದಕ್ಷಿಣ ಕರ್ನಾಟಕವಾಗಿದೆ. ಕಲ್ಯಾಣ ಕರ್ನಾಟಕಕ್ಕೆ ವಾರ್ತಾಭಾರತಿ ಕಾಲಿಟ್ಟಿದೆ. ಆ ಮೂಲಕ ಈ ಭಾಗದ ಅಭಿವೃದ್ಧಿಯಾಗಬೇಕು. ಇಲ್ಲಿನ ಸಮಸ್ಯೆಗಳ ಬಗ್ಗೆ ಪತ್ರಿಕೆಯು ಗಟ್ಟಿದನಿಯಲ್ಲಿ ನಿರಂತರ ವರದಿ ಮಾಡಬೇಕು ಎಂದು ಅವರು ಹೇಳಿದರು.
ಪ್ರವಾಹದಲ್ಲಿ ಯಾರು ಬೇಕಾದರೂ ಕೊಚ್ಚಿಹೋಗಬಹುದು. ಸತ್ತ ಮೀನುಗಳೂ ಕೊಚ್ಚಿ ಹೋಗುತ್ತದೆ. ಆದರೆ ಪ್ರವಾಹದ ಮುಂದೆ ಈಜಲು ಜೀವವಿರಬೇಕು. ಜೀವ ಇರುವುದು ಸ್ವತಂತ್ರ ಮಾಧ್ಯಮಗಳಿಗೆ. ರವೀಶ್ ಕುಮಾರ್, The Wire, ವಾರ್ತಾಭಾರತಿಯಂತಹ ಮಾಧ್ಯಮಗಳಿಗೆ ನನ್ನಂತಹವರಿಗೆ ಪ್ರವಾಹದಲ್ಲಿ ಈಜುವ ಜೀವವಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ಸರ್ವಾಧಿಕಾರಕ್ಕೆ ನಮ್ಮೆಲ್ಲರ ಭಯವೇ ಬಲ. ನಾವು ಹೆದರದಿದ್ದರೆ ಅವರು ಹೆದರುತ್ತಾರೆ. ಪೊಲೀಸ್, ಚುನಾವಣಾ ಆಯೋಗ, ನ್ಯಾಯಾಲಯ, ಪತ್ರಿಕೆಗಳನ್ನು ಕೊಂಡು ಅವರ ಕತ್ತು ಹಿಸುಕುವುದು, ಕೈ ತಿರುಚುವುದು, ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುವುದು ಅವರ ಕೆಲಸ. ಉಮರ್ ಖಾಲಿದ್ ಗೆ ಜಾಮೀನು ಸಿಗಲಿಲ್ಲ. ದೇಶಕ್ಕೆ, ಜನರಿಗೆ ನ್ಯಾಯಾಲಯಗಳಿಗೆ ಮನಸಾಕ್ಷಿಯ ಕೊರತೆ ಕಾಣುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸ್ವಾತಂತ್ಯ ಬಂದ ನಂತರ ಮೊದಲು ಪೊಲೀಸ್ ವ್ಯವಸ್ಥೆಯ ಮೇಲೆ ಭಯವಿತ್ತು. ಯಾರೇ ಅನ್ಯಾಯ ಎಸಗಿದರೂ ಕೋರ್ಟ್ ನಲ್ಲಿ ನೋಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದೆವು. ನ್ಯಾಯಾಂಗದ ಬಗ್ಗೆ ಒಂದು ನಂಬಿಕೆ ಇತ್ತು. ಇವತ್ತು ಆ ನಂಬಿಕೆ ಇಲ್ಲ. ಇದೆಲ್ಲದರ ಹಿಂದೆ ಬಿಜೆಪಿ ಅನ್ನುವ ಮಹಾಪ್ರಭು ನರೇಂದ್ರ ಮೋದಿ ಇದ್ದಾರೆ. ಭಾರತ ದೇಶ ಒಂದು ಕೊಳ ಆದರೆ, ಅದನ್ನು ಕಾಡುತ್ತಿರುವುದು ಅದರೊಳಗೆ ಇರುವುದು ಒಬ್ಬ ಬ್ರಹ್ಮ ರಾಕ್ಷಸ. ಕೊಳದ ಮೇಲೆ ಒಂದು ಕಮಲ ಅರಳಿದೆ. ಅದು ಬಿಜೆಪಿ. ನಾವು ಈ ಕಮಲದ ಜೊತೆ ಜಗಳವಾಡುತ್ತಿದ್ದೇವೆ. ಆದರೆ ಜಗಳ ಮಾಡಬೇಕಾಗಿರುವುದು ಕಮಲದ ಜೊತೆ ಅಲ್ಲ. ಅದರ ಬೇರಿನ ಶಕ್ತಿಯ ಆಳದಲ್ಲಿರುವ ಆರೆಸ್ಸೆಸ್ ಜೊತೆ ಎಂದು ಪ್ರಕಾಶ್ ರಾಜ್ ಹೇಳಿದರು.
ಪ್ರಪಂಚದ ಎಲ್ಲಾ ಸರ್ವಾಧಿಕಾರಿಗಳು, ಅದು ಹಿಟ್ಲರ್, ಮುಸ್ಸೋಲಿನಿ ಯಾರೇ ಇರಬಹುದು. ಅವರೆಲ್ಲಾ ಒಂದು ರಾಜಕೀಯ ಪಕ್ಷವಾಗಿದ್ದರು. ಜನರು ಅವರನ್ನು ಸೋಲಿಸಬಹುದಿತ್ತು. ಇಲ್ಲಿ ಆರೆಸ್ಸೆಸ್ ರಾಜಕೀಯ ಪಕ್ಷವಲ್ಲ. ಬಿಜೆಪಿಯನ್ನು ಸೋಲಿಸಿದರೆ ಮುಗಿಯುವುದಿಲ್ಲ. ಬೇರು ಸಹಿತ ಕೀಳಬೇಕು. ದೊಣ್ಣೆ ಹಿಡಿದುಕೊಂಡು ಓಡಾಡುತ್ತಿದ್ದಾಲ್ಲ. ಅವರ ಬೆಳವಣಿಗೆ ಚಡ್ಡಿಯಿಂದ ಪ್ಯಾಂಟ್ ಅಷ್ಟೇ. ಬೇರೇನೂ ಬೆಳವಣಿಗೆ ಇಲ್ಲ. ಈ ರೀತಿಯ ಆತಂಕಗಳ ಬಗ್ಗೆ ನಾವು ಯೋಚನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಹಿಂದಿ ಹೇರಿಕೆ, ಕ್ಷೇತ್ರಗಳ ಪುನರ್ವಿಂಗಡನೆ, ಚುನಾವಣೆಗಳ ಹೆಸರಿನಲ್ಲಿ ಭಾರತ ದೇಶದಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಈ ದಬ್ಬಾಳಿಕೆ ನಡೆಸುತ್ತಿರುವ ರಾಕ್ಷಸ ಯಾರು? ಆ ರಾಕ್ಷಸನ ಬಗ್ಗೆ ಹೇಳುತ್ತಿರುವ ವಾರ್ತಾಭಾರತಿಯಂತಹ ಪತ್ರಿಕೆ ಯಾವುದು ಎಂದು ನಾವು ಅರಿತುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.







