ಜೂ.27ರಂದು ಅತಿ ಹಿಂದುಳಿದ ಸಮುದಾಯಗಳ ಹಕ್ಕು–ಅಭಿವೃದ್ಧಿಗೆ ಚಿಂತನಾ ಸಭೆ: ಪ್ರಣವಾನಂದರಾಮ್ ಮಹಾಸ್ವಾಮಿ

ಕಲಬುರಗಿ: ಅತಿ ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಪ್ರತಿನಿಧಿತ್ವ, ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿ ಸೌಲಭ್ಯಗಳನ್ನು ಸಮರ್ಪಕವಾಗಿ ದೊರಕಿಸಿಕೊಡುವ ಉದ್ದೇಶದಿಂದ ಅತಿ ಹಿಂದುಳಿದ ಸಮುದಾಯಗಳ ಮಠಾಧೀಶರ ಚಿಂತನ ಸಭೆಯನ್ನು ಆಯೋಜಿಸಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರುಶಕ್ತಿ ಪೀಠದ ಪೂಜ್ಯರು ಹಾಗೂ ಅತಿ ಹಿಂದುಳಿದ ಮಠಾಧೀಶರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪ್ರಣವಾನಂದರಾಮ್ ಮಹಾಸ್ವಾಮಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 27 ಮತ್ತು 28ರಂದು ಎರಡು ದಿನಗಳ ಕಾಲ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದ ಯಾತ್ರಿ ನಿವಾಸದಲ್ಲಿ ಚಿಂತನ ಶಿಬಿರ ನಡೆಯಲಿದ್ದು, ಮೊದಲ ದಿನ ಬೆಳಿಗ್ಗೆ 9.30 ಗಂಟೆಗೆ ಶಿಬಿರವನ್ನು ತೈಲೇಂದ್ರ ಮಹಾಸಂಸ್ಥಾನದ ಜಗದ್ಗುರುಗಳು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಅತಿ ಹಿಂದುಳಿದ ಸಮುದಾಯಗಳು ರಾಜಕೀಯ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ನಿರಂತರವಾಗಿ ಕಡೆಗಣನೆಗೆ ಒಳಗಾಗುತ್ತಿದ್ದು, ಅವರ ಸಮಗ್ರ ಅಭಿವೃದ್ಧಿಗಾಗಿ ಸ್ಥಾಪಿಸಲ್ಪಟ್ಟಿರುವ ವಿವಿಧ ಅಭಿವೃದ್ಧಿ ನಿಗಮಗಳಿಗೆ ಸಮರ್ಪಕ ಅನುದಾನ ಒದಗಿಸುವ ಅಗತ್ಯವಿದೆ ಎಂದು ಹೇಳಿದರು. ಕೇವಲ ನಿಗಮಗಳ ಸ್ಥಾಪನೆಯಿಂದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಅವುಗಳಿಗೆ ಅಗತ್ಯ ಹಣಕಾಸು ಹಾಗೂ ಯೋಜನಾ ಬೆಂಬಲ ದೊರಕಬೇಕು. ಈ ಸಂಬಂಧ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಚಿಂತನ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ, ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅತಿ ಹಿಂದುಳಿದ ಸಮುದಾಯಗಳಿಗೆ ಯಾವುದೇ ರೀತಿಯ ಅನ್ಯಾಯ ಸಂಭವಿಸಿದಾಗ ಮಹಾಸಭೆ ಸಂಘಟಿತವಾಗಿ ಧ್ವನಿಯೆತ್ತಲಿದ್ದು, ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಾಗೂ ಸೌಲಭ್ಯಗಳನ್ನು ಹಂಚಿಕೆ ಮಾಡುವಂತೆ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದರು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಪರಿಣಾಮಕಾರಿ ಹೋರಾಟ ರೂಪಿಸುವ ಕುರಿತು ಕೂಡ ಶಿಬಿರದಲ್ಲಿ ಚರ್ಚೆ ನಡೆಯಲಿದೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ 40ಕ್ಕೂ ಹೆಚ್ಚು ಮಠಾಧೀಶರು, ಸಮಾಜದ ಮುಖಂಡರು ಹಾಗೂ ಸಂಘಟನೆಯ ಪ್ರಮುಖರು ಶಿಬಿರದಲ್ಲಿ ಭಾಗವಹಿಸಲಿದ್ದು, ಅತಿ ಹಿಂದುಳಿದ ಸಮುದಾಯಗಳ ಭವಿಷ್ಯದ ಕಾರ್ಯತಂತ್ರ ರೂಪಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ರಾಜೇಂದ್ರ ಸ್ವಾಮೀಜಿ, ದೊಡೇಂದ್ರ ಸ್ವಾಮೀಜಿ, ಅವಣ್ಣ ವೀರದೇವರು, ಮುದ್ದಣ್ಣ ಶರಣರು, ಭಗೀರನಾಮಠ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






