ಏ.26ರಂದು ಪ್ರತಿಜ್ಞಾ ಕ್ರಾಂತಿ ಅಭಿಯಾನಕ್ಕೆ ಚಾಲನೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಕಲಬುರಗಿ: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪೋಲಿಸರ ಮೂಲಕ ಲಿಂಗಾಯತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿದ ರಾಜ್ಯ ಸರ್ಕಾರದ ಕುತಂತ್ರ ನೀತಿಯನ್ನು ಖಂಡಿಸಿ, ಏ.26ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಕೂಡಲಸಂಗಮದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕವು ಶರಣರ ನಾಡಾಗಿದ್ದು, ಬಸವಣ್ಣನವರ ಕರ್ಮಭೂಮಿಯಾಗಿದೆ. ಹಾಗಾಗಿ ನಮ್ಮ ಪಂಚಮಸಾಲಿಯ 2 ಎ ಮೀಸಲಾತಿ ಹಾಗೂ ಸಮಾಜದ ಮೇಲೆ ಸರ್ಕಾರದಿಂದ ನಡೆದ ಹಲ್ಲೆ ಖಂಡಿಸಿ, 8ನೇ ಹಂತದ ಹೋರಾಟವನ್ನು ಕೈಗೆತ್ತಿಕೊಂಡಿದ್ದು, ಬಸವಕಲ್ಯಾಣ ನಾಡಿನಿಂದ ಏ.26ರಂದು ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.
ಪಂಚಮಸಾಲಿ ದಿಕ್ಷ, ಮಲೆಗೌಡ, ಗೌಡ ಲಿಂಗಾಯತರಿಗೆ 2ಎ ಮೀಸಲಾತಿ ಹಾಗೂ ಲಿಂಗಾಯತ ಒಬಿಸಿ ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಹಾಗೂ ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಲಿಂಗಾಯತರ ಮೇಲೆ ಮಾರಣಾಂತಿಕವಾಗಿ ನಡೆಸಿರುವ ಹಲ್ಲೆ ವಿರೋಧಿಸಿ, ನಡೆಸುತ್ತಿರುವ ಈ ಅಭಿಯಾನಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಏಪ್ರಿಲ್ 16ರಿಂದ 10 ದಿನಗಳ ಕಾಲ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ,ಹಳ್ಳಿ ಹಳ್ಳಿಗಳಲ್ಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನದ ಕುರಿತು ಸಮಾಜದ ಜನರಿಗೆ ಮನವರಿಕೆ ಮಾಡಲಾಗುವುದು. ನಮ್ಮ ಋಣದಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸ್ವಾಭಿಮಾನಿ ಹಾಗೂ ಆತ್ಮಗೌರವಕ್ಕಾಗಿ ನಾವು ಇನ್ನುಮುಂದೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋಗುವುದಿಲ್ಲ. ರಾಜ್ಯದ ಜನರ ಬಳಿ ಹೋಗಿ,ಜನರ ತೀರ್ಪಿನಂತೆ ಮುಂದೆ ಹೆಜ್ಜೆ ಇಡುತ್ತೇವೆ ಎಂದು ಸ್ವಾಮೀಜಿ ತಿಳಿಸಿದರು.
ನಮ್ಮ ಹೋರಾಟದಿಂದಲೇ ಇಂದು ಕೆಲವರು ಶಾಸಕರಾಗಿ ಗೆದ್ದು ಬಂದಿದ್ದಾರೆ, ಇದೀಗ ಅವರೇ ನಮ್ಮ ಬೇಡಿಕೆಗೆ ಬೆಂಬಲ ನೀಡದಿರುವುದು ನಮ್ಮ ಸಮುದಾಯಕ್ಕೆ ಅಪಮಾನ ಎಸಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೂ ಪಾಠ ಕಲಿಸಲಿದ್ದೇವೆ ಎಂದರು.
ಪಂಚಸೇನೆ ಜಿಲ್ಲಾಧ್ಯಕ್ಷ ಸೋಮಶಂಕರ್ ಮುಲಗೆ ಮಾತನಾಡಿ, ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಮಲ್ಲಣಗೌಡ ಪಾಟೀಲ್, ಸೋಮಶೇಖರ್ ಮುಲಗೆ, ಆನಂದರಾವ್ ಪಾಟೀಲ್, ಆನಂದ ಮೂಲಗೆ, ಅಲ್ಲಂಪ್ರಭು ಪಾಟೀಲ್ ಇದ್ದರು.