ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ: ನಲಿನ್ ಅತುಲ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲು ಮತ್ತು ಪ್ರಜಾ ಸೌಧ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸೆ.16 ಮತ್ತು 17 ರಂದು ಎರಡು ದಿನಗಳ ಕಾಲ ಕಲಬುರಗಿಗೆ ಆಗಮಿಸಲಿದ್ದು, ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಕೆ.ಕೆ.ಆರ್.ಡಿ.ಬಿ ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್ ಹೇಳಿದರು.
ಮಂಗಳವಾರ ಇಲ್ಲಿನ ಕೆ.ಕೆ.ಆರ್.ಡಿ.ಬಿ. ಸಭಾಂಗಣದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆ.16 ರಂದು ಯಡ್ರಾಮಿಯಲ್ಲಿ ನಡೆಯುವ ಕೆ.ಕೆ.ಆರ್.ಡಿ.ಬಿ ಮಂಡಳಿ ಅನುದಾನದ ಪ್ರಜಾ ಸೌಧ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಅಡಿಗಲ್ಲು ನೆರವೇರಿಸಲಿದ್ದು, ಪ್ರದೇಶದ ಸಚಿವರು, ಶಾಸಕರು ಭಾಗವಹಿಸುವುದರಿಂದ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಗಣ್ಯರ ಭದ್ರತೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದರು.
ಸೆಪ್ಟೆಂಬರ್ 17ರ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮಂಡಳಿಯ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಕೆ.ಕೆ.ಆರ್.ಡಿ.ಬಿ. ನೆರವಿನ ಆಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ, ಅರಣ್ಯ ಆವಿಷ್ಕಾರ, ಪ್ರಜಾ ಸೌಧ ಹೀಗೆ ಸುಮಾರು 11 ವಿಷಯಗಳ ಮೇಲೆ ವಿವಿಧ ಇಲಾಖೆಗಳು 11 ಸ್ಥಬ್ದಚಿತ್ರಗಳು ಪ್ರದರ್ಶಿಸಬೇಕು. ಇದಲ್ಲದೆ ವಿವಿಧ ಸರ್ಕಾರಿ ಸೌಲಭ್ಯ ವಿತರಿಸುವ ಕಾರ್ಯಕ್ರಮ ಸಹ ಆಯೋಜಿಸಬೇಕೆಂದು ನಲಿನ್ ಅತುಲ್ ಅಧಿಕಾರಿಗಳಿಗೆ ನಿರ್ದೇಶನ ಎಂದರು.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಭಾಗವಾಗಿ ಕಲಬುರಗಿ ನಗರದಲ್ಲಿ ವಾಕಥಾನ್, ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಆಯೋಜಿಸಬೇಕು. ಈ ಕುರಿತು ಚಿತ್ರಕಲಾ ಪರಿಷತ್ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಇನ್ನು ಹೈದ್ರಾಬಾದ ಕರ್ನಾಟಕ ವಿಮೋಚನೆ ವಿಷಯನ್ನಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಂದಾಳತ್ವದಲ್ಲಿ ನಡೆಯಬೇಕು ಎಂದು ನಲಿನ್ ಅತುಲ್ ತಿಳಿಸಿದರು.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಐತಿಹಾಸಿಕ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪ್ರವಾಸಿ ತಾಣಗಳನ್ನು ಬಿಂಬಿಸುವ ಎರಡು ದಿನಗಳ ಕಾಲ ಮಾಹಿತಿ ನೀಡುವ ಡಿಜಿಟಲ್ ಮಾಹಿತಿ ಮಳಿಗೆ ಮತ್ತು ವಸ್ತು ಪ್ರದರ್ಶನ ಮಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಬೇಕು. ಪ್ರತ್ಯೇಕವಾಗಿ ಜಿಲ್ಲಾವಾರು ಮಳಿಗೆ ಸ್ಥಾಪಿಸುವುದರ ಜೊತೆಗೆ ಅದರ ಮಾಹಿತಿ ನೀಡುವ ಧ್ವನಿವರ್ಧಕ ವ್ಯವಸ್ಥೆ ಸಹ ಏರ್ಪಾಡು ಮಾಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ.ಮಹೇಶ ಮೇಘಣ್ಣನವರ್, ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ ಮುಖ್ಯ ಸಂಚಾರಿ ಅಧಿಕಾರಿ ಸಂತೋಷಕುಮಾರ, ಮಂಡಳಿಯ ಉಪ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಅಪರ ನಿರ್ದೇಶಕಿ ಪ್ರವೀಣಪ್ರಿಯಾ ಡೇವಿಡ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತ ಅಮೀನ್ ಮುಕ್ತಾರ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಸ್.ತಿಪ್ಪೆಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.







