ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ : ಇಂಜಿನಿಯರ್‌ಗಳಿಗೆ ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್ ಅತುಲ್ ಕರೆ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಲೋಕೋಪಯೋಗಿ ಇಲಾಖೆಯ ಈಶಾನ್ಯ ವಲಯದ ಸಹಯೋಗದಲ್ಲಿ ವಿವಿಧ ಇಲಾಖೆಗಳ ಇಂಜಿನಿಯರ್‌ಗಳಿಗೆ ಆಯೋಜಿಸಿದ್ದ ಎರಡು ದಿನಗಳ ಸಮಗ್ರ ತಾಂತ್ರಿಕ ಕಾರ್ಯಾಗಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ನಗರದ ಜೆಸ್ಟ್ ಕ್ಲಬ್‌ನಲ್ಲಿ ನಡೆದ ಕಾರ್ಯಾಗಾರದಲ್ಲಿ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವಿವಿಧ ಇಲಾಖೆಗಳ ಸುಮಾರು 800 ಇಂಜಿನಿಯರ್‌ಗಳು ಭಾಗವಹಿಸಿ ಕ್ರಿಯಾ ಯೋಜನೆ ಸಿದ್ಧತೆ, ಕಾಮಗಾರಿಗಳ ಗುಣಮಟ್ಟ, ರಸ್ತೆ-ಸೇತುವೆ ನಿರ್ಮಾಣ ಹಾಗೂ ತಾಂತ್ರಿಕ ಮಾನದಂಡಗಳ ಕುರಿತು ತರಬೇತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್ ಅತುಲ್, ಅಭಿವೃದ್ಧಿ ಕಾಮಗಾರಿಗಳಲ್ಲಿ ದೋಷರಹಿತ ಕ್ರಿಯಾ ಯೋಜನೆ ರೂಪಿಸುವುದರ ಜೊತೆಗೆ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಕಾಮಗಾರಿ ಆರಂಭಕ್ಕೂ ಮುನ್ನ ಸ್ಥಳದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಬೇಕು. ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಪೂರ್ಣಗೊಳಿಸದೇ ರಸ್ತೆ ನಿರ್ಮಿಸಿ ಬಳಿಕ ಮತ್ತೆ ಅಗೆಯುವಂತಹ ತಪ್ಪುಗಳನ್ನು ಮರುಕಳಿಸಬಾರದು. ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ ಕಾಪಾಡಿ, ದಾಖಲೆಗಳಿಗೆ ಪರಿಶೀಲನೆಯ ನಂತರವೇ ಸಹಿ ಹಾಕಬೇಕು ಎಂದು ಸೂಚಿಸಿದರು.
ಗ್ರಾಮೀಣ ರಸ್ತೆ ಕಾಮಗಾರಿಗಳ ವೇಳೆ ಉಂಟಾಗುವ ಭೂ ವಿವಾದಗಳನ್ನು ತಹಶೀಲ್ದಾರ್ ಮಟ್ಟದಲ್ಲಿ ಬಗೆಹರಿಸಲಾಗದಿದ್ದರೆ ಕಾಲಹರಣ ಮಾಡದೆ ಸಹಾಯಕ ಆಯುಕ್ತರ ಗಮನಕ್ಕೆ ತಂದು ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ನಿವೃತ್ತ ಎಇಇ ಅನ್ವರ್, ತಾಂತ್ರಿಕ ತಜ್ಞ ಯಳಸಂಗಿಮಠ, ನಿವೃತ್ತ ಮುಖ್ಯ ಇಂಜಿನಿಯರ್ ಎಂ. ನಾರಾಯಣ್ ಹಾಗೂ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಸಿದ್ರಾಮಪ್ಪ ಅವಂಟಿ ಅವರು ಡಿಪಿಆರ್ ಸಿದ್ಧತೆ, ರಸ್ತೆ-ಸೇತುವೆ ವಿನ್ಯಾಸ, ಗುಣಮಟ್ಟ ನಿರ್ವಹಣೆ ಹಾಗೂ ತಾಂತ್ರಿಕ ಅಂಶಗಳ ಕುರಿತು ಉಪನ್ಯಾಸ ನೀಡಿ ಇಂಜಿನಿಯರ್‌ಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಕೆ.ಕೆ.ಆರ್.ಡಿ.ಬಿ ಮಂಡಳಿಯ ಉಪ ಕಾರ್ಯದರ್ಶಿ ಸುರೇಖಾ ಕಿರಣಗಿ, ಹೆಚ್ಚುವರಿ ನಿರ್ದೇಶಕರಾದ ಪ್ರವೀಣಾ ಪ್ರಿಯ ಡೇವಿಡ್, ಹಣಕಾಸು ನಿಯಂತ್ರಕ ಪವನಕುಮಾರ, ಅಧೀಕ್ಷಕ ಇಂಜಿನಿಯರ್ ಆನಂದ ಕಮಲಾಪೂರಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.






