ಸರಕಾರದ ಜೊತೆ ಪ್ರದೇಶದ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕಿದೆ : ಪ್ರೊ.ಎಂ.ಗೋವಿಂದರಾವ್
ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯಿಂದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆ

ಕಲಬುರಗಿ : ಡಾ.ಡಿ.ಎಂ.ನಂಜುಡಪ್ಪ ಅವರ ವರದಿಯಂತೆ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಹಣ ಖರ್ಚಾದರೂ ಕೆಲವು ತಾಲೂಕಿನಲ್ಲಿ ಹಿಂದುಳಿಯುವಿಕೆ ಹೋಗಿದೆಯಾದರು ಪಾದೇಶಿಕ ಅಸಮಾನತೆ ನೀಗಿಲ್ಲ. ಹೀಗಾಗಿ ಸರಕಾರದ ಜೊತೆ ಹಿಂದುಳಿಯುವಿಕೆ ಹೋಗಲಾಡಿಸಲು ಖಾಸಗಿ ಸಂಸ್ಥೆಗಳು ಸಹ ಕೈಜೋಡಿಸಬೇಕಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ ಹೇಳಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಿಂದುಳಿದ ಪ್ರದೇಶದಲ್ಲಿ ಇದುವರೆಗಿನ ಅಭಿವೃದ್ಧಿ ಹೊಂದಿರುವ ಆಧಾರದ ಮೇಲೆ ಹೊಸದಾಗಿ ಸೂಚ್ಯಂಕ ನಿಗದಿಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಡಿ.ಎಂ.ನoಜುಂಡಪ್ಪ ವರದಿಯಲ್ಲಿ ಎಲ್ಲವು ಸರಕಾರವೇ ಮಾಡಬೇಕೆಂದು ತಿಳಿಸಿದೆ. ಇಂದಿನ ದಿನಮಾನದಲ್ಲಿ ಖಾಸಗಿ ಕ್ಷೇತ್ರವು ತೀವ್ರಗತಿಯಲ್ಲಿ ಪ್ರಗತಿ ಕಾಣುತ್ತಿರುವುದರಿಂದ ಪ್ರದೇಶದ ಅಭಿವೃದ್ಧಿಗೆ ಅವರ ಸಹಕಾರ ಸಹ ಅಗತ್ಯವಿದೆ ಎಂದರು.
ಸಾವಿರಾರು ಕೋಟಿ ರೂ. ಹಣ ಖರ್ಚಾದರು ಕೆಲವು ತಾಲೂಕುಗಳು ಹಾಗೇ ಹಿಂದುಳಿದಿವೆ. 2011ರ ಸೆನ್ಸಸ್ ಮತ್ತು 2022-23ರ ಅಂಕಿ ಸಂಖ್ಯೆ ಗಮನಿಸಿದಾಗ ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ತಾಲೂಕುಗಳು ಇಂದಿಗೂ ಶಿಕ್ಷಣ, ಆರೋಗ್ಯ ಹಾಗೂ ತಲಾ ಆದಾಯದಲ್ಲಿ ಹಿಂದುಳಿದಿದೆ. ಇದಕ್ಕೆ ಕಾರಣ ಪತ್ತೆ ಹಚ್ಚಿ, ಅದನ್ನು ಸರಿದೂಗಿಸುವ ಅಂಶಗಳನ್ನು ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದರು.
ಹಿಂದುಳಿವಿಕೆ ಅಂಶಗಳು ತೆಗೆದುಕೊಳ್ಳುವಾಗ ತಲಾ ಆದಾಯ ಬಹುಮುಖ್ಯವಾಗುತ್ತದೆ. ದೇಶದ ತಲಾ ಆದಾಯಕ್ಕಿಂತ ರಾಜ್ಯದ ತಲಾ ಆದಾಯ ಹೆಚ್ಚಿದರೂ, ಕಲಬುರಗಿಯಂತಹ ಜಿಲ್ಲೆಯಲ್ಲಿ ತಲಾ ಆದಾಯ ತುಂಬಾ ಕಡಿಮೆಯಿದೆ. ರಾಜ್ಯದ ತಲಾ ಆದಾಯ ಶೇ.81 ಇದ್ದರೆ, ಇದಕ್ಕೆ ಬಹುಪಾಲು ಕೊಡುಗೆ ರಾಜಧಾನಿ ಬೆಂಗಳೂರು, ಕರಾವಳಿ ಭಾಗದ್ದಾಗಿದೆ. ಉಳಿದ ಭಾಗಗಳ ತಲಾ ಆದಾಯ ತೀರಾ ಕೆಳಮಟ್ಟದಲ್ಲಿದೆ. ಹಿಂದಿನ 175 ತಾಲೂಕುಗಳಲ್ಲಿ 114 ಹಿಂದುಳಿದ ತಾಲೂಕುಗಳಾದರೆ, 39 ಅತಿ ಹಿಂದುಳಿದ ತಾಲೂಕುಗಳಾಗಿವೆ. ಇದರಲ್ಲಿ ಉತ್ತರ ಕರ್ನಾಟಕದ 26 ಮತ್ತು ದಕ್ಷಿಣ ಕರ್ನಾಟದ 13 ತಾಲೂಕು ಸೇರಿವೆ ಎಂದರು.
ಸಮಿತಿ ಸದಸ್ಯ ಡಾ.ಸೂರ್ಯನಾರಾಯಣ ಮುಂಗಿಲ್ ಹಿಲ್ಲೆಮನಿ ಮಾತನಾಡಿ, ಪ್ರದೇಶದಲ್ಲಿ ತಾಯಿ-ಶಿಶು ಮರಣ ಪ್ರಮಾಣ ಹೆಚ್ಚಿದೆ. ಆರೋಗ್ಯ ಸಂಸ್ಥೆಗಳಿವೆ ವೈದ್ಯರಿಲ್ಲ. ಚಿತ್ತಾಪೂರ ತಾಲೂಕಿನಲ್ಲಿಯೇ 34 ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಇನ್ನು ಆಳಂದ, ಯಡ್ರಾಮಿ, ಕಾಳಗಿ, ಚಿಂಚೋಳಿ, ಸೇಡಂ ತಾಲೂಕಿನಲ್ಲಿ ಶೇ.10ರಷ್ಟು ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಕ್ಕಾಗಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಲಿಂಗ ಸಮಾನತೆ, ಸಾಕ್ಷರತೆ ಇಲ್ಲದೆ ಹೋದರೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲಾಗದು ಎಂದರು.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿಯ ನಿರ್ದೇಶಕ ಡಿ.ಚಂದ್ರಶೇಖರಯ್ಯ ಪ್ರಸ್ತಾವಿಕವಾಗಿ ಮಾತನಾಡಿ, ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಶೇ.40, ಕಿತ್ತೂರು ಕರ್ನಾಟಕ ಭಾಗಕ್ಕೆ ಶೇ.20, ಬೆಂಗಳೂರು ಭಾಗಕ್ಕೆ ಶೇ.25 ಹಾಗೂ ಮೈಸೂರು ಭಾಗಕ್ಕೆ ಶೇ.15 ರಷ್ಟು ಹಣ ನೀಡಲಾಗುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಮಾನವ ಸೂಚ್ಯಂಕದಲ್ಲಿ ಅಭಿವೃದ್ದಿಯಾಗದ ಕಾರಣ ಪ್ರಾದೇಶಿಕ ಅಸಮತೋಲನ ನಿವಾರಣೆ ನಿಟ್ಟಿನಲ್ಲಿ ಸರಕಾರ ಪ್ರೊ.ಎಂ.ಗೋವಿಂದರಾವ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದರಂತೆ ಇಂದು ಮೊದಲ ಸಭೆ ಕಲಬುರಗಿ ವಿಭಾಗದಲ್ಲಿ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಪ್ರದೇಶದ ಇತರೆ ಜಿಲ್ಲೆಯಲ್ಲಿಯೂ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.
ಹಣ ಇದೆ, ಖರ್ಚು ಮಾಡಲು ಅಧಿಕಾರಿಗಳಿಲ್ಲ :
ಕೆಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದರಿಂದ ಇದರ ಸಮಗ್ರ ಅಭಿವೃದ್ಧಿಗೆಂದೇ ಕೇಂದ್ರ ಸರಕಾರ 371ಜೆ ಕಾಯ್ದೆ ತಂದರೂ ಇದೂವರೆಗೆ ಸಮರ್ಪಕ ಅನುಷ್ಠಾನವಾಗಿಲ್ಲ. ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಪ್ರತಿ ವರ್ಷ ಈ ಭಾಗಕ್ಕೆ ಅನುದಾನ ಹಂಚಿಕೆಯಾಗಿಲ್ಲ. ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ವಾರ್ಷಿಕ 5,000 ಕೋಟಿ ರೂ. ನೀಡಲಾಗುತ್ತದೆ, ಆದರೆ ಖರ್ಚು ಮಾಡಲು ಮಂಡಳಿ ಶಕ್ತವಾಗಿಲ್ಲ. ಅಧಿಕಾರಿ-ಸಿಬ್ಬಂದಿ, ಇಂಜಿನಿಯರ್ ಗಳ ಕೊರತೆ ಇದೆ. ಆರೋಗ್ಯ ಕಟ್ಟಡಗಳು ನೋಡಲು ಸುಂದರವಾಗಿವೆ, ಒಳಗೆ ಹೋದರೆ ವೈದ್ಯರಿಲ್ಲ. ಶಿಕ್ಷರಿಲ್ಲದೆ ಶಿಕ್ಷಣ ಕ್ಷೇತ್ರ ಸುಧಾರಣೆ ಹೇಗೆ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಈ ಭಾಗದಲ್ಲಿ ತೊಗರಿ ಉದ್ದಿಮೆದಾರರ ಸಮಸ್ಯೆ ದೊಡ್ಡದಿದೆ. 80 ದಾಲ್ ಇಂಡಸ್ಟ್ರಿ ಬಂದ್ ಆಗಿವೆ. ತಮ್ಮ ವರದಿಯಲ್ಲಿ ತೊಗರಿ ಪ್ರೋತ್ಸಾಹ ನೀಡುವತ್ತ ಗಮನ ಹರಿಸಬೇಕು. ನೂತನ ತಾಲೂಕಿನಲ್ಲಿ ಎಲ್ಲಾ ಸರಕಾರಿ ಕಚೇರಿ ಸ್ಥಾಪನೆ ಜೊತೆಗೆ ಮೂಲಸೌಕರ್ಯ ಕಲ್ಪಿಸಬೇಕಿದೆ ಎಂದರು.
ಕ.ಕ. ಅಭಿವೃದ್ಧಿಯಾಗದ ಹೊರತು ಸಮಗ್ರ ಕರ್ನಾಟಕ ಅಭಿವೃದ್ಧಿ ಅಸಾಧ್ಯ :
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಣ್ಮಣ ದಸ್ತಿ ಮಾತನಾಡಿ, ರಾಜಕೀಯ ಇಚ್ಚಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಮುದಾಯ ಸಹಭಾಗಿತ್ವ ಇಲ್ಲದಕ್ಕೆ ಕ.ಕ. ಪ್ರದೇಶ ಹಿಂದುಳಿಯಲು ಪ್ರಮುಖ ಕಾರಣವಾಗಿದೆ. ಕೆ.ಕೆ.ಆರ್.ಡಿ.ಬಿ.ಗೆ 5,000 ಕೋಟಿ ರೂ. ಹಣ ನೀಡಿದರೂ ಮಂಡಳಿಯಿಂದ ದೂರದೃಷ್ಠಿ ಯೋಜನೆ ಬರುತ್ತಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗದ ಹೊರತು ಸಮಗ್ರ ಕರ್ನಾಟಕ ಅಭಿವೃಧ್ಧಿ ಅಸಾಧ್ಯ ಎಂದರು.
ಶಿವಯ್ಯ ಸ್ವಾಮಿ, ಸಾಯಬಣ್ಣಾ ಜಮಾದಾರ, ಬಸವರಾಜ ಕುಮ್ಮನೂರ ಸೇರಿದಂತೆ ಅನೇಕರು ತಮ್ಮ ಸಲಹೆ ಸೂಚನೆಗಳನ್ನು ಸಮಿತಿಗೆ ನೀಡಿದರು.
ಸಭೆಯಲ್ಲಿ ಸಮಿತಿ ಸದಸ್ಯ ಡಾ.ಎಸ್.ಟಿ.ಬಾಗಲಕೋಟೆ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲೆಯ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಕೆ.ಕೆ.ಆರ್.ಡಿ.ಬಿ. ಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು.







