ಹೇಡಿಗಳಿಂದ ಪ್ರಿಯಾಂಕ್ ಖರ್ಗೆಗೆ ಬೆದರಿಕೆ : ಬಿ.ಆರ್.ಪಾಟೀಲ್

ಬಿ.ಆರ್.ಪಾಟೀಲ್
ಬೆಂಗಳೂರು : ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿಷೇಧಿಸಬೇಕೆಂದು ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಗುರಿಯಾಗಿಸಿಕೊಂಡು ಬೆದರಿಕೆ ಹಾಕುತ್ತಿರುವವರು ಹೇಡಿಗಳು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ನವರು ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳನ್ನು ಮಾಡುವ ಮೂಲಕ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ. ಆದರೆ, ಇದು ಪ್ರಜಾಪ್ರಭುತ್ವಕ್ಕೆ ನೀಡುತ್ತಿರುವ ಬೆದರಿಕೆ ಆಗಿದ್ದು, ಇಂತಹ ಹೇಡಿಗಳಿಗೆ ನಾವು ಹೆದರುವುದಿಲ್ಲ ಎಂದರು.
ವೈಚಾರಿಕವಾಗಿ ಬಹಿರಂಗ ಚರ್ಚೆಗೆ ಬರಲಿ, ನಾವು ದಿಟ್ಟ ಉತ್ತರ ನೀಡುತ್ತೇವೆ. ಆದರೆ, ಜೀವ ಬೆದರಿಕೆಗೆ ಹಾಕುವ ಹಂತಕ್ಕೆ ಹೋಗುವುದು ಒಳ್ಳೆಯ ಬೆಳವಣಿಗೆ ಅಲ್ಲ. ಆರೆಸ್ಸೆಸ್ನವರು ಲಾಠಿ ಹಿಡಿದು ಧರ್ಮ ರಕ್ಷಣೆ ಮಾಡುತ್ತೇವೆ ಎನ್ನುತ್ತಾರೆ. ಲಾಠಿಗೂ ಧರ್ಮಕ್ಕೆ ಸಂಬಂಧವೇನು? ಹೃದಯದಿಂದ ಧರ್ಮ ಕಟ್ಟಬೇಕೆ ಹೊರತು ಹಿಂಸೆಯಿಂದ ಅಲ್ಲ ಎಂದು ಅಭಿಪ್ರಾಯಪಟ್ಟರು.





