ಬೈರಾಮಡಗಿ ಶಾಲಾ ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಸುರೇಶ ಅವಟೆ ಆಗ್ರಹ

ಅಫಜಲಪುರ: ತಾಲೂಕಿನ ಬೈರಾಮಡಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಲ್ಯಾಂಡ್ ಆರ್ಮಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ನೂತನ ಶಾಲಾ ಕೊಠಡಿಗಳ ಕಾಮಗಾರಿಯಲ್ಲಿ ಅವೈಜ್ಞಾನಿಕವಾಗಿ ಕೆಲಸ ನಡೆಯುತ್ತಿದ್ದು, ಕ್ರಿಯಾ ಯೋಜನೆ (ಆಕ್ಷನ್ ಪ್ಲಾನ್) ಪ್ರಕಾರ ಕಟ್ಟಡ ಸಾಮಗ್ರಿಗಳನ್ನು ಬಳಸದೆ ಸರ್ಕಾರದ ಅನುದಾನ ದುರುಪಯೋಗ ಮಾಡಲಾಗುತ್ತಿದೆ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಫಜಲಪುರ ತಾಲೂಕು ಅಧ್ಯಕ್ಷ ಹಾಗೂ ವಕೀಲರಾದ ಸುರೇಶ ಅವಟೆ ಆರೋಪಿಸಿದ್ದಾರೆ.
ಸುಮಾರು ಒಂದು ಕೋಟಿ ವೆಚ್ಚದ ಈ ಕಾಮಗಾರಿಯಲ್ಲಿ ಗುಣಮಟ್ಟದ ಸಾಮಗ್ರಿಗಳನ್ನು ಬಳಸದೆ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ನಿರ್ಮಾಣವಾಗುತ್ತಿರುವ ಕಟ್ಟಡದ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ತಾಂತ್ರಿಕ ತನಿಖೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕ್ರಿಯಾ ಯೋಜನೆಗೆ ವಿರುದ್ಧವಾಗಿ ಕಾಮಗಾರಿ ನಡೆಸಿ ಸರ್ಕಾರದ ಅನುದಾನ ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಗುಣಮಟ್ಟದ ಕಾಮಗಾರಿ ಖಚಿತಪಡಿಸಬೇಕು ಎಂದು ಸುರೇಶ ಅವಟೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಿನೋದ್ ಅತನೂರ, ಮೊಬಿನ್ ಕಿನ್ನಿ, ಚನ್ನಬಸು ದೊಡ್ಡಮನಿ, ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ್ ಮಲ್ಲಿನಾಥ್ ಬಿರಾದಾರ್, ಮೋದಿನ ಸಬ್ ಆಲೂರ್, ಬಸವರಾಜ್ ಬಾಗನಹಳ್ಳಿ, ಸುಭಾಸ್ ನಾಯ್ಕೋಡಿ ಹಾಗೂ ಶಂಕರ್ ಪಾಟೀಲ್ ಉಪಸ್ಥಿತರಿದ್ದರು.






