ಭಾಷೆಗೆ ಗಡಿಯಿಲ್ಲ, ಕರ್ನಾಟಕ ಹಲವು ಭಾಷೆಗಳ ತವರು: ಪ್ರೊ. ಆರ್.ಕೆ. ಹುಡಗಿ

ಕಲಬುರಗಿ: "ಭಾಷೆಗೆ ಗಡಿಯಿಲ್ಲ, ಸಮುದಾಯ ಧರ್ಮಗಳೆಂಬ ಸಂಕೋಲೆಗಳಿಲ್ಲ. ಕರ್ನಾಟಕ ಅನೇಕ ಭಾಷೆಗಳಿಗೆ ತವರೂರು" ಎಂದು ಹಿರಿಯ ಲೇಖಕ ಹಾಗೂ ಅನುವಾದಕ ಪ್ರೊ.ಆರ್.ಕೆ. ಹುಡಗಿ ಹೇಳಿದರು.
ಖ್ವಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕನ್ನಡ ಮತ್ತು ಇತಿಹಾಸ ವಿಭಾಗದ ವತಿಯಿಂದ ವಿಶ್ವವಿದ್ಯಾಲಯ ಆವರಣದ ಫೊರೆನ್ಸಿಕ್ ಕಟ್ಟಡದ ಉಪನ್ಯಾಸ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ತಮ್ಮ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಪ್ರೊ-ಉಪಕುಲಪತಿ ಪ್ರೊ. ಸಯ್ಯದ್ ಅಶ್ಫಾಕ್ ಅಹ್ಮದ್ ಮಾತನಾಡಿ, ಕನ್ನಡ ಭಾಷೆಯ ಮಹತ್ವವನ್ನು ವಿವರಿಸಿ, "ಕನ್ನಡವನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ" ಎಂದರು. ಎಂಜಿನಿಯರಿಂಗ್ ವಿಭಾಗದ ಡೀನ್ ಪ್ರೊ. ಸುಭಾಷ ಕಮಲ ಅವರು, ಪ್ರಾಮಾಣಿಕ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಸೋಲನ್ನು ಯಶಸ್ಸಾಗಿ ಪರಿವರ್ತಿಸಬಲ್ಲದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಲೆ, ಮಾನವಿಕ, ಸಮಾಜ ವಿಜ್ಞಾನ, ಭಾಷೆ ಮತ್ತು ಕಾನೂನು ನಿಕಾಯದ ಡೀನ್ ಪ್ರೊ. ನಿಶಾತ್ ಆರಿಫ್ ಹುಸೈನಿ ಅಧ್ಯಕ್ಷತೆ ವಹಿಸಿ, ಮಾನವನ ಜೀವನದಲ್ಲಿ ಭಾಷೆಯ ಮಹತ್ವದ ಬಗ್ಗೆ ವಿವರಿಸಿದರು. ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ, ರಸಪ್ರಶ್ನೆ ಹಾಗೂ ಚಿತ್ರಕಲಾ ಸ್ಪರ್ಧೆಗಳ ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಹುಮೇರಾ ಫಾತಿಮಾ ಕಿರಾತ್ (ಪಠಣ) ಪ್ರಸ್ತುತಪಡಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಸಂಗನಗೌಡರ ಪ್ರಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಯೋಗೇಶ ಸ್ವಾಗತಿಸಿದರು, ಡಾ. ಅಸ್ಲಂ ವಾಲಿಕಾರ ಅತಿಥಿಗಳನ್ನು ಪರಿಚಯಿಸಿದರು. ಮಾಧ್ಯಮ ಸಂಯೋಜಕಿ ಡಾ. ನಮ್ರತಾ ರಾವುತ ನಿರೂಪಿಸಿದರು. ಕನ್ನಡ ವಿಭಾಗದ ಪ್ರೊ. ರಾಜಸಾಹೇಬ ವಂದಿಸಿದರು.






