ನಾಡ ಕಚೇರಿಯಿಂದ ತ್ವರಿತ ಸೇವೆ: ರಾಜ್ಯದಲ್ಲಿಯೇ ಕಲಬುರಗಿ ನಂಬರ್-1

ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್
ಕಲಬುರಗಿ: ಅಟಲ್ಜೀ ಜನಸ್ನೇಹಿ ಕೇಂದ್ರದ ಮೂಲಕ ಡಿಸೆಂಬರ್-2025ರ ಮಾಹೆಯಲ್ಲಿ ಸ್ವೀಕರಿಸಿದ 39,964 ಅರ್ಜಿಗಳಲ್ಲಿ 38,133 ಅರ್ಜಿಗಳನ್ನು ಕಾಲಮಿತಿಯಲ್ಲಿಯೇ ವಿಲೇವಾರಿ ಮಾಡಿ ಶೇ.95.42ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ಮತ್ತೆ ನಂಬರ್-1 ಸ್ಥಾನ ಪಡೆದಿದೆ.
ನಾಡ ಕಚೇರಿಯಿಂದ ಕಂದಾಯ ಇಲಾಖೆಯ 41 ಸೇವೆ ನೀಡಲು ಡಿಸೆಂಬರ್ -2025ರ ಮಾಹೆಯಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗಧಿತ ಅವಧಿಯಲ್ಲಿ 9.31 ವಿಲೇವಾರಿ ಸೂಚ್ಯಂಕದ ಪ್ರಕಾರ ವಿಲೇವಾರಿ ಮಾಡುವ ಮೂಲಕ ಈಶಾನ್ಯದ ತುದಿಯಲ್ಲಿರುವ ಕಲಬುರಗಿ ಜಿಲ್ಲೆ ಸಾರ್ವಜನಿಕರ ಸೇವೆ ವಿಲೇವಾರಿಯಲ್ಲಿ ರಾಜ್ಯದ ಗಮನ ಸೆಳೆದಿದೆ.
ಕಳೆದ 2025ರ ಜುಲೈ ಮಾಹೆಯಲ್ಲಿಯೂ ಕಲಬುರಗಿ ಜಿಲ್ಲೆ ಅಟಲ್ಜೀ ಜನಸ್ನೇಹಿ ಕೇಂದ್ರದಿಂದ ಅರ್ಜಿ ವಿಲೇವಾರಿಯಲ್ಲಿ ಮೊದಲನೇ ಸ್ಥಾನ ಪಡೆದಿತ್ತು. ಇದೀಗ ಮತ್ತೆ ವಿಲೇವಾರಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದು, ಕಲಬುರಗಿ ಜಿಲ್ಲಾಡಳಿತ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನಲ್ಲಿ ಸ್ವೀಕೃತ 3,344 ರಲ್ಲಿ 3,070, ಆಳಂದದಲ್ಲಿ 4,880 ರಲ್ಲಿ 4,572, ಚಿಂಚೋಳಿಯಲ್ಲಿ ಸ್ವೀಕೃತ 2,654 ರಲ್ಲಿ 2,599, ಚಿತ್ತಾಪುರನಲ್ಲಿ ಸ್ವೀಕೃತ 3,330 ರಲ್ಲಿ 3,285, ಜೇವರ್ಗಿಯಲ್ಲಿ ಸ್ವೀಕೃತ 5,081 ರಲ್ಲಿ 4,905, ಕಲಬುರಗಿಯಲ್ಲಿ ಸ್ವೀಕೃತ 9,566 ರಲ್ಲಿ 8,926, ಕಾಳಗಿಯಲ್ಲಿ ಸ್ವೀಕೃತ 1,950 ರಲ್ಲಿ 1,881, ಕಮಲಾಪುರನಲ್ಲಿ ಸ್ವೀಕೃತ 1,782 ರಲ್ಲಿ 1,691, ಸೇಡಂನಲ್ಲಿ ಸ್ವೀಕೃತ 3,101 ರಲ್ಲಿ 3,051, ಶಹಾಬಾದ್ ನಲ್ಲಿ ಸ್ವೀಕೃತ 2,043 ರಲ್ಲಿ 2,008, ಯಡ್ರಾಮಿಯಲ್ಲಿ ಸ್ವೀಕೃತ 2,233 ರಲ್ಲಿ 2,145 ಅರ್ಜಿ ವಿಲೇವಾರಿ ಮಾಡುವ ಜಿಲ್ಲೆಯ ಜನತೆಗೆ ನಾಡ ಸೇವೆ ಕಚೇರಿ ತ್ವರಿತವಾಗಿ ಸ್ಪಂದಿಸಿದಿರುವುದು ಅಂಕಿ ಅಂಶಗಳು ಖಚಿತಪಡಿಸಿವೆ.
ಜಿಲ್ಲೆಯಲ್ಲಿನ ಈ ಕಾರ್ಯ ಸಾಧನೆಗೆ ನಾಡ ಕಚೇರಿ ಮತ್ತು ಆಟಲ್ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಗಳ ಸಹಕಾರ, ಕಾರ್ಯತತ್ಪರತೆ ಕಾರಣವಾಗಿರುತ್ತದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿರುವ ಡಿ.ಸಿ ಬಿ.ಫೌಜಿಯಾ ತರನ್ನುಮ್ ಅವರು, ಮುಂದಿನ ದಿನಗಳಲ್ಲಿ ಇದೇ ರೀತಿಯ ಸಾಧನೆ ಮಾಡುವಂತೆ ಸಿಬ್ಬಂದಿಗಳನ್ನು ಹುರಿದುಂಬಿಸಿದ್ದಾರೆ.
ಟಾಪ್ 10ರಲ್ಲಿ ಕಲ್ಯಾಣದ 4 ಜಿಲ್ಲೆಗಳು:
ಇನ್ನು ರಾಜ್ಯದಾದ್ಯಂತ ಜಿಲ್ಲಾವಾರು ಅರ್ಜಿ ವಿಲೇವಾರಿ ಪಟ್ಟಿ ಅವಲೋಕಿಸಿದಾಗ ಅಗ್ರ 10 ರಲ್ಲಿ ಕಲಬುರಗಿ, ವಿಜಯನಗರ ಜಿಲ್ಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದರೆ, ರಾಯಚೂರು ನಾಲ್ಕನೇ ಮತ್ತು ಯಾದಗಿರಿ ಜಿಲ್ಲೆ ಒಂಭತ್ತನೇ ಸ್ಥಾನ ಪಡೆದಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ 4 ಜಿಲ್ಲೆಗಳು ಸಾರ್ವಜನಿಕ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಂತಾಗಿದೆ.







