ಕಲಬುರಗಿ ಜಿಲ್ಲೆಗೆ 6 ಟಿಎಂಸಿ ನೀರು ಕಾಯ್ದಿಸುವಂತೆ ಪ್ರಸ್ತಾವನೆ ಸಲ್ಲಿಕೆ: ಡಿಸಿ ಇಕ್ರಮ್ ಶರೀಫ್

ಕಲಬುರಗಿ: ಪ್ರಸ್ತುತ ಬರಗಾಲದ ಛಾಯೆ ಹಾಗೂ ಮುಂಬರುವ ಬೇಸಿಗೆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಾರಾಯಣಪುರ ಜಲಾಶಯದಿಂದ 6 ಟಿಎಂಸಿ ನೀರನ್ನು ಕಲಬುರಗಿ ಜಿಲ್ಲೆಗೆ ಕಾಯ್ದಿರಿಸುವಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ಉಳಿದ ಅವಧಿ ಹಾಗೂ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ವಿಡಿಯೋ ಸಂವಾದದ ಮೂಲಕ ಭಾಗವಹಿಸಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಕಲಬುರಗಿ ಜಿಲ್ಲೆಯ ಕುಡಿಯುವ ನೀರಿನ ಅಗತ್ಯತೆ ಕುರಿತು ಪ್ರಸ್ತಾವನೆ ಸಲ್ಲಿಸಿದರು.
ಕಲಬುರಗಿ ಮಹಾನಗರ ಪಾಲಿಕೆ, ಅಫಜಲಪುರ ಪುರಸಭೆ, ಭೀಮಾ ಏತ ನೀರಾವರಿ ಯೋಜನೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಲ್ಲಿಸಿರುವ ಬೇಡಿಕೆಯನ್ವಯ, ಕಲಬುರಗಿ ನಗರಕ್ಕೆ 2.50 ಟಿಎಂಸಿ, ಭೀಮಾ ನದಿ ದಡದ ಗ್ರಾಮಗಳಿಗೆ 1.50 ಟಿಎಂಸಿ, ಅಫಜಲಪುರ ನಗರಕ್ಕೆ 1.00 ಟಿಎಂಸಿ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ 0.40 ಟಿಎಂಸಿ ನೀರಿನ ಅಗತ್ಯವಿದೆ. ಜತೆಗೆ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳ ಕೆರೆಗಳನ್ನು ಅವಲಂಬಿಸಿರುವ ಗ್ರಾಮಗಳು ಹಾಗೂ ಪಟ್ಟಣಗಳ ಕುಡಿಯುವ ನೀರಿನ ಅಗತ್ಯತೆಗಾಗಿ ತಲಾ 0.30 ಟಿಎಂಸಿಯಂತೆ ಒಟ್ಟು 0.60 ಟಿಎಂಸಿ ನೀರು ಬೇಕಾಗಿದೆ. ಈ ಎಲ್ಲ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಒಟ್ಟು 6.00 ಟಿಎಂಸಿ ನೀರನ್ನು ಕಾಯ್ದಿರಿಸುವಂತೆ ಸಭೆಯ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಜೂನ್ವರೆಗಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜನರು ಮತ್ತು ಜಾನುವಾರುಗಳ ಅಗತ್ಯತೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ನಾರಾಯಣಪುರ ಜಲಾಶಯದಿಂದ ಅಗತ್ಯ ಪ್ರಮಾಣದ ನೀರನ್ನು ಕಾಯ್ದಿರಿಸುವಂತೆ ಸಮರ್ಪಕ ಪ್ರಸ್ತಾವನೆ ಮಂಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.






