ವಕೀಲರ ಮೇಲಿನ ಹಲ್ಲೆ ಖಂಡಿಸಿ ಚಿಂಚೋಳಿಯಲ್ಲಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ
ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

ಚಿಂಚೋಳಿ: ಬೆಂಗಳೂರಿನ ವೈಟ್‌ಫೀಲ್ಡ್‌ನ ವಕೀಲ ಮಂಜುನಾಥ್, ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀರಾಮ್ ಅವರ ಬರ್ಬರ ಹತ್ಯೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕ್ಕಿ ಅವರ ಮೇಲಿನ ಕೊಲೆ ಯತ್ನದ ಘಟನೆಯನ್ನು ಖಂಡಿಸಿ, ಚಿಂಚೋಳಿ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ಮಂಗಳವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ನ್ಯಾಯಾಲಯದ ಎದುರಿನ ಬೀದರ್ ಮುಖ್ಯ ರಸ್ತೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಎಸ್. ಆಡಕಿ ಮಾತನಾಡಿ, ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ. ಆದರೆ, ಇಂತಹ ಘಟನೆಗಳನ್ನು ತಡೆಗಟ್ಟುವಲ್ಲಿ ಹಾಗೂ ವಕೀಲರು ನಿರ್ಭೀತಿಯಿಂದ ಮತ್ತು ಸುರಕ್ಷಿತವಾಗಿ ವೃತ್ತಿ ನಡೆಸಲು ಅಗತ್ಯ ಭದ್ರತೆ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಮಾಜಿ ಅಧ್ಯಕ್ಷರಾದ ಶ್ರೀಮಂತ ಕಟ್ಟಿಮನಿ, ಚಂದ್ರಕಾಂತ ಮಲಸಾ ದೇಗಲ್ಮಡಿ, ನರೇಂದ್ರ ಛಲವಾದಿ, ದಿನೇಶ ಚವ್ಹಾಣ ಹಾಗೂ ಹಿರಿಯ ವಕೀಲ ವಿಶ್ವನಾಥ ಬೆನಕಿನ್ ಮಾತನಾಡಿ, ವಕೀಲರ ಮೇಲೆ ಹಲ್ಲೆ ನಡೆಸುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ವಕೀಲರ ರಕ್ಷಣೆಗೆ ವಿಶೇಷ ಕಾನೂನನ್ನು ತಕ್ಷಣ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ಬಳಿಕ ವಕೀಲರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರ ಮೂಲಕ ರಾಜ್ಯಪಾಲರಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವುದರೊಂದಿಗೆ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಸ್. ರಾಮತೀರ್ಥ, ಕಾರ್ಯದರ್ಶಿ ಸೂರ್ಯಕಾಂತ ಎಂ. ಕರಣಿಕರ, ಖಜಾಂಚಿ ಸುನಿಲ್ ಕುಮಾರ್ ಬಿ. ಸೊಲಾಪುರ, ಶ್ರೀನಿವಾಸ್ ಬಂಡಿ, ರಾಜೇಂದ್ರ ವರಮಾ, ರಾಜು ಮಲಸಾ, ವಿಜಯಕುಮಾರ್ ರಾಠೋಡ್, ರವೀಂದ್ರ ಹೂವಿನಬಾವಿ, ಪ್ರವೀಣಕುಮಾರ ನಮಲಿಕರ್, ಸಾವನ್ ಕಲಬುರಗಿ, ಸೂರ್ಯಕಾಂತ ಗಾರಂಪಳ್ಳಿ, ಹಿರಿಯ ಮುಖಂಡರಾದ ಗೋಪಾಲರಾವ ಕಟ್ಟಿಮನಿ, ಕೆ.ಎಂ. ಬಾರಿ, ಹಣಮಂತ ಪೂಜಾರಿ, ಭೀಮಶೆಟ್ಟಿ ಮುರುಡಾ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಭಾಗವಹಿಸಿದ್ದರು.






