ಕನ್ನೇರಿ ಸ್ವಾಮೀಜಿಗೆ ಬಸವಕಲ್ಯಾಣ ಪ್ರವೇಶ ನಿರ್ಬಂಧಕ್ಕೆ ಆಗ್ರಹಿಸಿ ಜೂನ್ 28ರಂದು ಪ್ರತಿಭಟನಾ ರ‍್ಯಾಲಿ

ಕಲಬುರಗಿ: ಬಸವಾದಿ ಶರಣರ ಹೆಸರಿನಲ್ಲಿ ಕೋಮುದ್ವೇಷ ಹರಡಿಸುತ್ತಿರುವ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ ಬಸವಕಲ್ಯಾಣ ಪ್ರವೇಶ ನೀಡಬಾರದು ಎಂದು ಆಗ್ರಹಿಸಿ ಜೂನ್ 28ರಂದು ಬೆಳಿಗ್ಗೆ 10 ಗಂಟೆಗೆ ಬಸವಕಲ್ಯಾಣದ ಮುಖ್ಯದ್ವಾರದ ಎದುರು ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ್ದರೂ, ಕೆಲವರು ಬಸವಾದಿ ಶರಣರ ಬದುಕು ಮತ್ತು ಬೋಧನೆಗಳನ್ನು ವೈದೀಕರಣಗೊಳಿಸುವ ಮೂಲಕ ಬಸವತತ್ವದ ಮೂಲ ಆಶಯಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆಗಳಿಗೆ ಸರ್ಕಾರ ಕಡಿವಾಣ ಹಾಕಿ, ಬಸವಕಲ್ಯಾಣದ ಪಾವಿತ್ರ್ಯವನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಿನಲ್ಲಿ ಸಮಾಜದಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ. ಬಸವತತ್ವವನ್ನು ಅನುಸರಿಸುವ ಸ್ವಾಮೀಜಿಗಳು ಹಾಗೂ ಚಿಂತಕರನ್ನು ಬಸವ ತಾಲಿಬಾನಿಗಳು, ಇನ್ನಿತರ ಅವಹೇಳನಕಾರಿ ಪದಗಳಿಂದ ನಿಂದಿಸಲಾಗುತ್ತಿದೆ. ಇಂತಹ ಭಾಷೆಯ ಬಳಕೆಯನ್ನು ಸುಪ್ರೀಂ ಕೋರ್ಟ್ ಕೂಡ ಖಂಡಿಸಿರುವುದಾಗಿ ಅವರು ಹೇಳಿದರು.
ಕನ್ನೇರಿ ಸ್ವಾಮೀಜಿ ಸೇರಿದಂತೆ ಕೆಲವು ಧಾರ್ಮಿಕ ಮುಖಂಡರು ಬಸವಣ್ಣನವರ ವಚನಗಳನ್ನು ಸಂದರ್ಭೋಚಿತವಾಗಿ ಮತ್ತು ಅಪೂರ್ಣವಾಗಿ ಬಳಸಿಕೊಂಡು ಜನರಲ್ಲಿ ತಪ್ಪು ಅರ್ಥಗಳನ್ನು ಬಿತ್ತುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಶೆಟಗಾರ, ಬಸವತತ್ವದ ಹೆಸರಿನಲ್ಲಿ ನಡೆಯುತ್ತಿರುವ ಈ ರೀತಿಯ ಚಟುವಟಿಕೆಗಳನ್ನು ಸಮಾಜ ಸಹಿಸುವುದಿಲ್ಲ ಎಂದರು.
ಈ ವಿಷಯವಾಗಿ ಈಗಾಗಲೇ ಜೂನ್ 7ರಂದು ಬೀದರ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕನ್ನೇರಿ ಸ್ವಾಮೀಜಿಗೆ ಬಸವಕಲ್ಯಾಣ ಪ್ರವೇಶ ನಿರ್ಬಂಧಿಸುವ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅದರ ಮುಂದುವರಿದ ಭಾಗವಾಗಿ ಜೂನ್ 14ರಂದು ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ವಿವಿಧ ಬಸವಪರ ಸಂಘಟನೆಗಳು ಹಾಗೂ ರಾಜ್ಯದ ಪ್ರಗತಿಪರ ಮಠಾಧೀಶರ ಸಂಯುಕ್ತ ಸಭೆ ನಡೆಯಲಿದ್ದು, ಮುಂದಿನ ಹೋರಾಟದ ರೂಪುರೇಷೆ ಹಾಗೂ ಜೂನ್ 28ರ ಪ್ರತಿಭಟನಾ ಕಾರ್ಯಕ್ರಮದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಸವಣ್ಣನವರ ಸಮಾನತೆ, ಮಾನವೀಯತೆ ಮತ್ತು ವೈಚಾರಿಕತೆಯ ಸಂದೇಶವನ್ನು ಉಳಿಸಿ ಬೆಳೆಸುವ ಉದ್ದೇಶದಿಂದಲೇ ಈ ಹೋರಾಟ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬಸವಪರರು ಮತ್ತು ಲಿಂಗಾಯತ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಘೂಳಿ, ಹಣಮಂತರಾಯ ಪಾಟೀಲ, ನಂದು ಪಾಟೀಲ, ಬಸಣ್ಣ ಎಂ. ಗುಣಾರಿ, ಶಿವಶರಣಪ್ಪ ದೇಗಾಂವ ಸೇರಿದಂತೆ ಹಲವರು ಉಪಸ್ಥಿತರಿದ್ದರು.






