Afzalpur | ರೈತರಿಗೆ ಅವಮಾನ ಆರೋಪ: ಆಗ್ರೋ ಏಜೆನ್ಸಿಗೆ ಬೀಗ ಜಡಿದು ಪ್ರತಿಭಟನೆ

ಅಫಜಲಪುರ: ರೈತರೊಂದಿಗೆ ಅವಮಾನಕರವಾಗಿ ವರ್ತಿಸಲಾಗಿದೆ ಎಂಬ ಆರೋಪಿಸಿ ಪಟ್ಟಣದ ಗೊಲ್ಲಾಳೇಶ್ವರ ಆಗ್ರೋ ಏಜೆನ್ಸಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಹಾಂತೇಶ್ ಜಮಾದಾರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಆಗ್ರೋ ಮಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರೈತರೊಂದಿಗೆ ಗೌರವಯುತ ಹಾಗೂ ಸೌಜನ್ಯದಿಂದ ವರ್ತಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಮಹಾಂತೇಶ್ ಜಮಾದಾರ ಹಾಗೂ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗೂಳೆ, "ರೈತ ದತ್ತು ಪೂಜಾರಿ ಅವರು ರಸಗೊಬ್ಬರ ಖರೀದಿಸಲು ಆಗ್ರೋ ಕೇಂದ್ರಕ್ಕೆ ತೆರಳಿದ ಸಂದರ್ಭದಲ್ಲಿ ಅವರಿಗೆ ಅವಮಾನ ಮಾಡಲಾಗಿದೆ" ಎಂದು ಆರೋಪಿಸಿದರು. ಈ ಘಟನೆ ರೈತ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದು, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ರೈತರು ಹಾಗೂ ಆಗ್ರೋ ಮಾಲಕರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ರೈತರ ಅಹವಾಲುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಳಿಕ ನಡೆದ ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಗಡಗಿಮನಿ ಮಾತನಾಡಿ, ರೈತರಿಗೆ ಅಗತ್ಯ ರಸಗೊಬ್ಬರ ಮತ್ತು ಕೃಷಿ ಪರಿಕರಗಳನ್ನು ಸಮರ್ಪಕವಾಗಿ ವಿತರಿಸಬೇಕು ಹಾಗೂ ರೈತರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ಮಾರಾಟಗಾರರಿಗೆ ಸೂಚಿಸಿದರು. ನಿಯಮ ಉಲ್ಲಂಘನೆ ಅಥವಾ ರೈತರಿಗೆ ತೊಂದರೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಸಂಜೀವಕುಮಾರ ದಾಸರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಲ್ಲೇಂದ್ರ ಡಾಂಗೆ ಹಾಗೂ ಜಿಲ್ಲಾ ಕೃಷಿ ಉಪನಿರ್ದೇಶಕ ಡಾ. ಬಾಲರಾಜ ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳು, ಹಸಿರು ಸೇನೆಯ ಕಾರ್ಯಕರ್ತರು ಹಾಗೂ ರೈತರು ಭಾಗವಹಿಸಿದ್ದರು.






