ಅಫಜಲಪುರ | ಪಿಎಸ್‌ಐ ಕಮಲು ರಾಠೋಡರ ಸೇವೆಗೆ ಅಭಿನಂದನೆ

ಅಫಜಲಪುರ: ಪೊಲೀಸ್ ಇಲಾಖೆಯಲ್ಲಿ 35 ವರ್ಷಗಳ ಕಾಲ ಕರ್ತವ್ಯನಿಷ್ಠೆ, ಶಿಸ್ತು ಹಾಗೂ ಜನಸ್ನೇಹಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ರೇವೂರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಕಮಲು ಎಂ. ರಾಠೋಡ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಲಖನ್ ಮಸಗುಪ್ಪಿ, "ಪೊಲೀಸ್ ಇಲಾಖೆ ಒಂದು ಕುಟುಂಬದಂತಿದ್ದು, ಕಮಲು ರಾಠೋಡ ಅವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. 35 ವರ್ಷಗಳ ಸೇವಾ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕಿಯಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಇಲಾಖೆಗೆ ಉತ್ತಮ ಹೆಸರು ತಂದಿದ್ದಾರೆ. ಅವರ ಸೇವೆ ಎಲ್ಲರಿಗೂ ಮಾದರಿಯಾಗಿದೆ" ಎಂದು ಪ್ರಶಂಸಿಸಿದರು.
ರೇವೂರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಮತಿ ವಾತ್ಸಲ್ಯ ಮಾತನಾಡಿ, "ಕಳೆದ ಎರಡು ವರ್ಷಗಳಿಂದ ಕಮಲು ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿತ್ತು. ಅವರು ಸದಾ ಸಹಕಾರ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುತ್ತಿದ್ದರು. ಆತ್ಮೀಯ ಸಹೋದರನಂತೆ ನಡೆದುಕೊಂಡ ಅವರು ನಿವೃತ್ತಿ ಜೀವನದಲ್ಲಿ ಸುಖ, ಶಾಂತಿ ಹಾಗೂ ಉತ್ತಮ ಆರೋಗ್ಯದಿಂದಿರಲಿ" ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ರೈಂ ಪಿಎಸ್‌ಐ ಕಮಲು ಎಂ. ರಾಠೋಡ, "ನನ್ನ ಸೇವಾ ಜೀವನ ನನಗೆ ಅಪಾರ ತೃಪ್ತಿ ನೀಡಿದೆ. ರೇವೂರ ಠಾಣೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ನೀಡಿದ ಪ್ರೀತಿ, ಸಹಕಾರ ಮತ್ತು ಪ್ರೋತ್ಸಾಹವನ್ನು ಎಂದಿಗೂ ಮರೆಯುವುದಿಲ್ಲ" ಎಂದು ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಕಮಲು ರಾಠೋಡ ಅವರ ಕುಟುಂಬ ಸದಸ್ಯರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






