ಖರ್ಗೆ ರ‍್ಯಾಲಿ ನಡೆಸಿದ 'ಸ್ಥಳ ಶುದ್ಧೀಕರಣ' : ಚಿಂಚೋಳಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಚಿಂಚೋಳಿ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ‘ಶುದ್ಧೀಕರಣ’ ಹೆಸರಿನಲ್ಲಿ ಅವಮಾನಿಸಲಾಗಿದೆ ಎಂದು ಆರೋಪಿಸಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘ ಪರಿವಾರದ ಕ್ರಮವನ್ನು ಖಂಡಿಸಿ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ರಸ್ತೆ ತಡೆ ನಡೆಸಲಾಯಿತು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ತಹಸೀಲ್ದಾರ್ ಕಚೇರಿವರೆಗೆ ಸಾಗಿತು. ಪ್ರಮುಖ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ರಸ್ತೆ ತಡೆ ನಡೆಸಿದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ, ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಮಾತನಾಡಿ, ದೇಶದ ಹಿರಿಯ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿರುವ ಅವಮಾನವು ಇಡೀ ದಲಿತ ಸಮುದಾಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾಡಿದ ಆಘಾತವಾಗಿದೆ. ರಾಜಕೀಯ ದ್ವೇಷದಿಂದ ನಡೆಯುವ ಇಂತಹ ಜಾತಿವಾದಿ ಕೃತ್ಯಗಳನ್ನು ಕಾಂಗ್ರೆಸ್ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಸರ್ಕಾರ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಆನಂದ್ ಟೈಗರ್ ಮಾತನಾಡಿ, ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಸದಾ ಧ್ವನಿ ಎತ್ತುವ ನಾಯಕರನ್ನು ಗುರಿಯಾಗಿಸುವ ಮೂಲಕ ಬಿಜೆಪಿ ತನ್ನ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿದರು.
ಪ್ರತಿಭಟನೆಯ ಕೊನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಿ, ಮುಖಂಡರಾದ ಅನಿಲ್ ಜಮಾದಾರ್, ಭೀಮರಾವ್ ಟಿಟಿ, ಬಾಬರಾವ್ ಪಾಟೀಲ, ಬಸಯ್ಯ ಗುತ್ತೇದಾರ್,ನರಸಿಂಹಲು ಕುಂಬಾರ, ಪ್ರವೀಣ ಟಿಟಿ, ಲಕ್ಷ್ಮಣ ಅವಂಟಿ, ಶೈಲೇಶ ಹುಲಿ, ಅಬ್ದುಲ್ ಬಾಸಿದ್, ಮಲ್ಲಿಕಾರ್ಜುನ ಭೂಶೆಟ್ಟಿ, ಜಗನ್ನಾಥ ಗುತ್ತೇದಾರ್, ರಾಮಶೆಟ್ಟಿ ಪವಾರ್, ನಾಗೇಶ್ ಗುಣಾಜಿ, ಅನ್ವರ್ ಖತಿಬ್, ಅಬ್ದುಲ್ ಹಫೀಜ್, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.






