ನಾಡ ಕಚೇರಿಯಿಂದ ತ್ವರಿತ ಸೇವೆ: ಕಲಬುರಗಿ ರಾಜ್ಯಕ್ಕೆ ನಂಬರ್ 1

ಕಲಬುರಗಿ: ಅಟಲ್‌ಜೀ ಜನಸ್ನೇಹಿ ಕೇಂದ್ರದ ಮೂಲಕ ಮೇ-2026ರ ಅವಧಿಯಲ್ಲಿ ಸ್ವೀಕರಿಸಿದ 39,363 ಅರ್ಜಿಗಳ ಪೈಕಿ 38,551 ಅರ್ಜಿಗಳನ್ನು ನಿಗದಿತ ಅವಧಿಯಲ್ಲೇ ವಿಲೇವಾರಿ ಮಾಡುವ ಮೂಲಕ ಶೇ.97.94ರಷ್ಟು ಪ್ರಗತಿ ಸಾಧಿಸಿರುವ ಕಲಬುರಗಿ ಜಿಲ್ಲೆ, ರಾಜ್ಯದಲ್ಲಿಯೇ ಅರ್ಜಿ ವಿಲೇವಾರಿಯಲ್ಲಿ ಮತ್ತೆ ಪ್ರಥಮ ಸ್ಥಾನ ಪಡೆದಿದೆ.
ನಾಡ ಕಚೇರಿಗಳ ಮೂಲಕ ಕಂದಾಯ ಇಲಾಖೆಯ 43 ಸೇವೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು 9.48 ವಿಲೇವಾರಿ ಸೂಚ್ಯಂಕದೊಂದಿಗೆ ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಿರುವುದು ಜಿಲ್ಲೆಯ ಆಡಳಿತ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಈ ಸಾಧನೆಯೊಂದಿಗೆ ಕಲಬುರಗಿ ಜಿಲ್ಲೆ ಮತ್ತೊಮ್ಮೆ ರಾಜ್ಯದ ಗಮನ ಸೆಳೆದಿದೆ.
ಈ ಹಿಂದೆ 2025ರ ಜುಲೈ ಹಾಗೂ ಡಿಸೆಂಬರ್ ತಿಂಗಳಲ್ಲಿಯೂ ಅರ್ಜಿ ವಿಲೇವಾರಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ಜಿಲ್ಲೆ, ಇದೀಗ ಮತ್ತೊಮ್ಮೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ತಾಲೂಕುವಾರು ವಿಲೇವಾರಿ ಅಂಕಿಅಂಶಗಳ ಪ್ರಕಾರ ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಕಲಬುರಗಿ, ಕಾಳಗಿ, ಕಮಲಾಪುರ, ಸೇಡಂ, ಶಹಾಬಾದ್ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಬಹುತೇಕ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಲಾಗಿದೆ.
ಈ ಸಾಧನೆಗೆ ನಾಡ ಕಚೇರಿ ಹಾಗೂ ಅಟಲ್‌ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಗಳ ಕಾರ್ಯತತ್ಪರತೆ ಮತ್ತು ಸಮರ್ಪಣಾಭಾವ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅಭಿನಂದಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮನೋಭಾವವನ್ನು ಮುಂದುವರಿಸುವಂತೆ ಸಿಬ್ಬಂದಿಗೆ ಅವರು ಕರೆ ನೀಡಿದ್ದಾರೆ.
ಟಾಪ್-10ರಲ್ಲಿ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳು
ರಾಜ್ಯದ ಜಿಲ್ಲಾವಾರು ಅರ್ಜಿ ವಿಲೇವಾರಿ ಪಟ್ಟಿಯಲ್ಲಿ ಕಲಬುರಗಿ ಮೊದಲ ಸ್ಥಾನ ಪಡೆದಿದ್ದರೆ, ವಿಜಯನಗರ ಮೂರನೇ, ಬಳ್ಳಾರಿ ನಾಲ್ಕನೇ ಹಾಗೂ ರಾಯಚೂರು ಏಳನೇ ಸ್ಥಾನ ಗಳಿಸಿವೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳು ಸಾರ್ವಜನಿಕ ಸೇವಾ ವಿತರಣೆಯಲ್ಲಿ ಮುಂಚೂಣಿಯಲ್ಲಿರುವುದು ಗಮನಾರ್ಹವಾಗಿದೆ.






