ಚಿತ್ರಕಲೆ, ಸಂಗೀತ ಪಠ್ಯದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಪೂರಕ: ರಾಜೇಂದ್ರ ಝಳಕಿ

ಕಲಬುರಗಿ: ಚಿತ್ರಕಲೆ ಹಾಗೂ ಸಂಗೀತವು ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದರ ಜತೆಗೆ ಪಠ್ಯಕ್ರಮದ ಗುಣಾತ್ಮಕ ಶಿಕ್ಷಣಕ್ಕೆ ಪೂರಕವಾಗಿವೆ ಎಂದು ಸಾಹಿತಿ ಹಾಗೂ ಶಿಕ್ಷಕ ರಾಜೇಂದ್ರ ಝಳಕಿ ಹೇಳಿದರು.
ನಗರದ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಡಿ ಯುವ ಚಿತ್ರಕಲಾವಿದ ಮಲ್ಲಿಕಾರ್ಜುನ ವಿಶ್ವಕರ್ಮ ದಿಗ್ಗಾಂವ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚಿತ್ರಕಲೆ ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದು ಮಕ್ಕಳ ಕಲ್ಪನಾಶಕ್ತಿ, ಸೂಕ್ಷ್ಮಗ್ರಹಿಕೆ ಹಾಗೂ ಸೃಜನಶೀಲತೆಯನ್ನು ವಿಕಸನಗೊಳಿಸುವ ಪ್ರಮುಖ ಸಾಧನವಾಗಿದೆ. ಶಿಕ್ಷಣದ ಜತೆಗೆ ಕಲೆಗೂ ಸಮಾನ ಪ್ರೋತ್ಸಾಹ ನೀಡಿದಾಗ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಅಧ್ಯಾಪಕ ಡಾ. ಮಲ್ಲಿಕಾರ್ಜುನ ಬಾಗೋಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಾನವನ ಸೃಜನಶೀಲತೆಯನ್ನು ಬೆಳೆಸುವಲ್ಲಿ ಚಿತ್ರಕಲೆ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಹಂಪಿ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಐತಿಹಾಸಿಕ ಸ್ಮಾರಕಗಳು, ಕೋಟೆ–ಕೊತ್ತಲುಗಳು, ದೇವಾಲಯಗಳು ಹಾಗೂ ವಾಸ್ತುಶಿಲ್ಪಗಳು ಚಿತ್ರಕಲಾವಿದರಿಗೆ ಸ್ಫೂರ್ತಿಯ ಮೂಲಗಳಾಗಿವೆ. ರಾಷ್ಟ್ರಕೂಟರ ಕಾಲದ ಇತಿಹಾಸ, ಕಮಲ ಮಹಲ್, ಕಲಬುರಗಿ ಬಹಮನಿ ಕೋಟೆ ಸೇರಿದಂತೆ ಈ ಭಾಗದ ಸಾಂಸ್ಕೃತಿಕ ಪರಂಪರೆಯನ್ನು ಚಿತ್ರಕಲೆಯ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
‘ದೇಶ ಸುತ್ತು, ಕೋಶ ಓದು’ ಎಂಬ ಮಾತಿನಂತೆ, ವಿವಿಧ ಸ್ಥಳಗಳನ್ನು ವೀಕ್ಷಿಸಿ ಅಲ್ಲಿನ ಕಲೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಅರಿಯುವುದು ಮಾನವನ ಜ್ಞಾನ ವಿಕಾಸಕ್ಕೆ ಸಹಕಾರಿ. ಚಿತ್ರಗಳು ಇತಿಹಾಸದ ಹಲವು ಪುಟಗಳನ್ನು ದಾಖಲಿಸುವ ದೃಶ್ಯ ದಾಖಲೆಗಳಾಗಿವೆ. ಹಸ್ತಪ್ರತಿಗಳು, ನಕ್ಷೆಗಳು, ಸ್ಮಾರಕಗಳ ಚಿತ್ರಗಳು ಹಾಗೂ ಜನಜೀವನವನ್ನು ಬಿಂಬಿಸುವ ಕಲಾಕೃತಿಗಳು ಹಿಂದಿನ ಕಾಲದ ಬದುಕು, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿಯಲು ನೆರವಾಗುತ್ತವೆ ಎಂದರು.
ಹಿಂದೆ ಕಲೆಗೆ ರಾಜಾಶ್ರಯ ದೊರೆಯುತ್ತಿತ್ತು. ಈಗಲೂ ರಾಜಕೀಯ ಮುಖಂಡರು ಹಾಗೂ ಸರ್ಕಾರಗಳು ಕಲೆ, ಸಾಹಿತ್ಯ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು. ಕಲ್ಯಾಣ ಕರ್ನಾಟಕ ಉತ್ಸವಗಳಂತಹ ಕಾರ್ಯಕ್ರಮಗಳ ಮೂಲಕ ಈ ಭಾಗದ ಕಲೆ ಮತ್ತು ಪರಂಪರೆಗೆ ಹೆಚ್ಚಿನ ಪ್ರಚಾರ ದೊರೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಿ.ಬಿ. ಬಿರಾದಾರ ಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಮಲ್ಲಿಕಾರ್ಜುನ ಕೋರಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಲ್ಲಿಕಾರ್ಜುನ ವಿಶ್ವಕರ್ಮ ಅವರ ಕುಟುಂಬದ ಸದಸ್ಯರು, ಚಿತ್ರಕಲಾವಿದರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






