ಕಲಬುರಗಿ | ರಟಕಲ್ ಗ್ರಾಮ ಪಂಚಾಯತ್‌ನಲ್ಲಿ ತೆರಿಗೆ ಹಣ ದುರುಪಯೋಗ ಆರೋಪ; ಜಿಲ್ಲಾ ಪಂಚಾಯತ್ ಸಿಇಓಗೆ ದೂರು

ಕಲಬುರಗಿ: ಕಾಳಗಿ ತಾಲೂಕಿನ ರಟಕಲ್ ಗ್ರಾಮ ಪಂಚಾಯತ್‌ನಲ್ಲಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರವೆಸಗಲಾಗಿದೆ ಎಂದು ಆರೋಪಿಸಿ ಪಿಡಿಓ ವಿರುದ್ಧ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ನವ ಕರ್ನಾಟಕ ಡಾ.ಬಿ.ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿ ಜನಪರ ಸಮಿತಿಯ ಮುಖಂಡ ವಿಷ್ಣುಸ್ವಾಮಿ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪಂಚಾಯತ್‌ನಲ್ಲಿ ಮ್ಯಾನವಲ್ ರಶೀದಿಗಳು ನೀಡುವುದು ರದ್ದಾಗಿದೆ. ಆದರೂ, ನಾಲ್ಕು ತಿಂಗಳಿಂದ ಮ್ಯಾನವಲ್ ರಸೀದಿ ಮತ್ತು ಆನ್‌ಲೈನ್ ಮೆಷಿನ್ ಮೂಲಕ ವಿವಿಧ ರೀತಿಯಲ್ಲಿ ಲಕ್ಷಾಂತರ ತೆರಿಗೆ ಹಣ ಪಡೆದು ಗ್ರಾಮ ಪಂಚಾಯತ್ ನಿಧಿ-1 ಬ್ಯಾಂಕ್ ಖಾತೆಗೆ ಜಮೆ ಮಾಡದೆ ಬೇಕಾಬಿಟ್ಟಿ ಖರ್ಚು ಮಾಡಿ ಭ್ರಷ್ಟಾಚಾರವೆಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ರಟಕಲ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ 15 ರಿಂದ 20 ದಿನಗಳಿಗೊಮ್ಮೆ ಕಚೇರಿಗೆ ಬರುವ ಮೂಲಕ ಕರ್ತವ್ಯ ಲೋಪವೆಸಗುತ್ತಿದ್ದಾರೆ. ತೆರಿಗೆ ಹಣ ದುರ್ಬಳಕೆ ಮಾಡುತ್ತಿದ್ದಾರೆ. ಅವರ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಲೋಕಾಯುಕ್ತರಿಗೆ ವಿಷ್ಣುಸ್ವಾಮಿ ದೂರು ನೀಡಿದ್ದಾರೆ.





