ಆರ್.ಡಿ.ಪಿ.ಆರ್-ಪತ್ರಕರ್ತರ ಫ್ರೆಂಡ್ಲಿ ಕ್ರಿಕೆಟ್: ಆರ್.ಡಿ.ಪಿ.ಆರ್ ತಂಡಕ್ಕೆ ಗೆಲುವು

ಕಲಬುರಗಿ: ಜನವರಿ 23 ರಿಂದ 25ರ ವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿ-ನೌಕರರ ಕ್ರೀಡಾಕೂಟ ಹಿನ್ನೆಲೆಯಲ್ಲಿ ರವಿವಾರ ಆರ್.ಡಿ.ಪಿ.ಆರ್ ಮತ್ತು ಮಾಧ್ಯಮದವರ ನಡುವೆ ಇಲ್ಲಿ ನಡೆದ ಸ್ನೇಹಪರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್.ಡಿ.ಪಿ.ಆರ್ ತಂಡ ಜಯ ಸಾಧಿಸಿದೆ.
ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅರುಣ ಕದಮ್ ನೇತೃತ್ವದ ಮಾಧ್ಯಮ ತಂಡ 10 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 73 ರನ್ ಬಾರಿಸಿ ಗೆಲುವಿಗೆ 74ರನ್ ಗಳ ಗುರಿ ನೀಡಿದರು.
ನಂತರ ಬ್ಯಾಟಿಂಗ್ ಮಾಡಿದ ಪ್ರದೇಪ ನೇತೃತ್ವದ ಆರ್.ಡಿ.ಪಿ.ಆರ್ ತಂಡ 9 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 74 ಗುರಿ ಮುಟ್ಟಿ ಜಯ ಗಳಿಸಿದರು. ಆರ್.ಡಿ.ಪಿ.ಆರ್ ತಂಡದ ಸುನೀಲ ಅವರು 36 ರನ್ (ಅಜೇಯ) ರನ್ ಬಾರಿಸಿ ಪಂದ್ಯ ಗೆಲುವಿಗೆ ಕಾರಣರಾಗಿದಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮುನ್ನ ಎಸ್.ಪಿ. ಅಡ್ಡೂರು ಶ್ರೀನಿವಾಸಲು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಬ್ಯಾಟಿಂಗ್ ಮಾಡುವ ಮೂಲಕ ಸ್ನೇಹಮಯಿ ಪಂದ್ಯಾವಳಿಗೆ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಸಿ.ಪಿ.ಓ ಎಸ್.ಎಸ್.ಮಠಪತಿ, ಯೋಜನಾ ನಿರ್ದೇಶಕ ಜಗದೇವಪ್ಪ, ಸಿ.ಎ.ಓ ವಿಕಾಸ ಸಜ್ಜನ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ ಸೇರಿದಂತೆ ಅಧಿಕಾರಿ ಸಿಬ್ಬಂದಿ ಇದ್ದರು.







